ಮಂಡ್ಯ: ನಾಗಮಂಗಲ ತಾಲೂಕಿನ ನರಗಲು ಗ್ರಾಮದ ಯುವಕನ ನಿಗೂಢ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅಕ್ರಮ ಗಣಿ ಮಾಫಿಯಾವನ್ನು ಬಹಿರಂಗಪಡಿಸಿದ್ದಕ್ಕೆ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ನರಗಲು ಗ್ರಾಮದ ನಿವಾಸಿ ಮೋಹನ್(31) ಕಳೆದ ಭಾನುವಾರ ಪತ್ನಿಗೆ ಹೊಲಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದರು.
ಆದರೆ ಮತ್ತೆ ಮನೆಗೆ ವಾಪಸ್ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡು ಗ್ರಾಮದಲ್ಲಿ ಹುಡುಕಾಡಿದ್ದರು. ಕೊನೆಗೆ ಎಲ್ಲೂ ಪತ್ತೆಯಾಗದ ಕಾರಣ ಮೋಹನ್‍ನನ್ನು ಅಪಹರಣ ಮಾಡಲಾಗಿದೆ ಎಂದು ಕುಟುಂಬಸ್ಥರು ದೂರು ನೀಡಿದ್ದರು. ಮೋಹನ್ ಕಿಡ್ನಾಪ್‍ಗೆ ಅಕ್ರಮ ಕಲ್ಲು ಕ್ರಷರ್ ನಡೆಸುತ್ತಿರುವ ಕುಮಾರ್ ಕಾರಣವಾಗಿರಬಹುದು ಎಂಬ ಅನುಮಾನ ಈಗ ವ್ಯಕ್ತವಾಗಿದೆ.
ಕುಟುಂಬಸ್ಥರ ಆರೋಪವೇನು?: ಕುಮಾರ್ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋತಿದ್ದ. ಈ ಸೋಲಿಗೆ ಮೋಹನ್ ಕಾರಣ ಎಂದು ತಿಳಿದ ಕುಮಾರ್ ಹಗೆ ಸಾಗಿಸುತ್ತಿದ್ದ. ಅಲ್ಲದೇ ತಮಿಳುನಾಡು ಮೂಲದ ರಾಜು ಎಂಬವರು ಕುಮಾರ್ ಜಮೀನಿನಲ್ಲಿ ಕ್ರಷರ್ ನಡೆಸುತ್ತಿದ್ದರು. ಇತ್ತೀಚೆಗೆ ಈ ಕ್ರಷರ್ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಸಿಬ್ಬಂದಿ ದಾಳಿ ನಡೆಸಿದ್ದರು. ಈ ದಾಳಿಗೆ ಮೋಹನ್ ಕಾರಣವೆಂದು ರಾಜು ತಿಳಿದುಕೊಂಡಿದ್ದಾನೆ.
ಈ ಹಿನ್ನೆಲೆ ಮೋಹನ್‍ನನ್ನ ರಾಜು ಮತು ಕುಮಾರ್ ಅಪಹರಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ನಾಪತ್ತೆಯಾದ ಮೋಹನ್ ಬಳಸುತ್ತಿದ್ದ ಮೊಬೈಲ್ ಟವರ್ ಮೂಲಕ ಈಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗ ಗಣಿ ಮಾಲೀಕನ ಜೊತೆ ಸೇರಿ ಸಂಬಂಧಿಕರಿಂದಲೇ ಮೋಹನ್ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಹತ್ಯೆ ಮಾಡಿದ ಬಳಿಕ ಹೊಳೆನರಸೀಪುರ ತಾಲ್ಲೂಕಿನ ಭಂಟರ ತಳಾಲು ಗ್ರಾಮದ ಅರಣ್ಯ ಪ್ರದೇಶದಲ್ಲಿ ಶವವನ್ನು ಹೂತಿಟ್ಟಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದೀಗ ಮೋಹನ್ ಹೂತಿಟ್ಟಿರುವ ಸ್ಥಳಕ್ಕೆ ಬಿಂಡಿಗನವಿಲೆ ಪೊಲೀಸರು ಆಗಮಿಸಿದ್ದು ಸ್ಥಳದಲ್ಲಿ ಹಾಸನ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಕೊಲೆ ವಿಷಯ ತಿಳಿದು ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದಾರೆ.
ಓದಿ: ಓಬಳಾಪುರಂ ಮೈನಿಂಗ್ ಕೇಸ್: ಒಎಂಸಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್