ಮಂಡ್ಯ: ಕೊರೊನಾ ಹಿನ್ನೆಲೆ, ಹೊರ ರಾಜ್ಯಗಳಿಗೆ ಹಾಲಿನ ಸರಬರಾಜು ನಿಂತರೂ ರೈತರ ಹಾಲನ್ನು ಖರೀದಿ ಮಾಡುವ ಮೂಲಕ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್) ರೈತರ ಸಂಕಷ್ಟಕ್ಕೆ ಸ್ಪಂದಿಸಿ ಮಾದರಿಯಾಗಿದೆ.
ಮನ್‌ಮುಲ್ ಜಿಲ್ಲೆಯ 1,15,000 ಮಂದಿ ರೈತರಿಗೆ ಉದ್ಯೋಗ ನೀಡಿದೆ. ಜಿಲ್ಲೆಯಲ್ಲಿ 551 ಮಹಿಳಾ ಸಂಘಗಳು ಸೇರಿದಂತೆ 1,236 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಇದವುಗಳಲ್ಲಿ 2,64,664 ಮಂದಿ ಸದಸ್ಯರಿದ್ದಾರೆ. ಇವರಲ್ಲಿ 1,01,820 ಮಂದಿ ಇಂದಿಗೂ ಹಾಲು ಸರಬರಾಜು ಮಾಡುತ್ತಿದ್ದಾರೆ. ಪ್ರತಿ ನಿತ್ಯ 8,45,368 ಲೀಟರ್ ಹಾಲನ್ನು ಮನ್‌ಮುಲ್ ಖರೀದಿ ಮಾಡುತ್ತಿದೆ.
ಮನ್ಮುಲ್ನಲ್ಲಿ ಬೆಣ್ಣೆ, ಹಾಲಿನ ಪುಡಿ, ತುಪ್ಪ, ಪನ್ನೀರು, ಪೇಡ, ಕೋವಾ, ಮಸಾಲ ಮಜ್ಜಿಗೆ, ಬರ್ಫಿ ಉತ್ಪಾದನೆ ಮಾಡಲಾಗುತ್ತಿದೆ. ಇದರ ಜೊತೆಗೆ ರೈತರಿಗೆ ಅವಶ್ಯಕವಾದ ಮೇವು, ವೈದ್ಯಕೀಯ ಸೌಲಭ್ಯ, ವಿಮಾ ಸೌಲಭ್ಯ, ರೈತರ ಮಕ್ಕಳಿಗೆ ಪ್ರೋತ್ಸಾಹ ಧನ, ಗುಂಪು ವಿಮೆ ಸೇರಿದಂತೆ ಹಲವು ಸೌಲಭ್ಯ ನೀಡುತ್ತಿದೆ.
ಹೀಗಿದ್ದೂ ಮನ್‌ಮುಲ್‌ಗೆ ಕೊರೊನಾ ಸಂಕಷ್ಟ ಎದುರಾಗಿದೆ. ಸದ್ಯ ದಾಸ್ತಾನು ಮಳಿಗೆಯಲ್ಲಿ 3,223 ಟನ್ ಹಾಲಿನ ಪುಡಿ, 1,175 ಟನ್ ಬೆಣ್ಣೆ, 14 ಟನ್ ತುಪ್ಪ, ಕೆನೆಭರಿತ 40 ಟನ್ ಉತ್ಪನ್ನ ಮಾರಾಟವಾಗದೇ ಉಳಿದುಕೊಂಡಿದೆ. ಮನ್ಮುಲ್ನಿಂದ ತಿರುಪತಿ, ಮುಂಬೈ ಹಾಗೂ ಕೇರಳಕ್ಕೆ ಹಾಲು ಹಾಗೂ ಉತ್ಪನ್ನಗಳನ್ನು ಸರಬರಾಜು ಮಾಡಲಾಗುತ್ತಿತ್ತು. ಆದರೆ ಕೋವಿಡ್‌ನಿಂದ ಸರಬರಾಜು ನಿಂತುಹೋಗಿದ್ದು, ಶೀಘ್ರದಲ್ಲೇ ಮಾರುಕಟ್ಟೆ ಸಹಜ ಸ್ಥಿತಿಗೆ ಬರುವ ನಿರೀಕ್ಷೆಯಲ್ಲಿದೆ ಆಡಳಿತ ಮಂಡಳಿ.