ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಕಾಂಚಾಣದ್ದೆ ಸದ್ದು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಆಡಿಯೋ ಹಣದ ಹೊಳೆಗೆ ಸಾಕ್ಷಿಗಾಗಿದೆ ಎಂದೇ ಬಣ್ಣಿಸಲಾಗುತ್ತಿದೆ. ಆ ಆಡಿಯೋ ಜಿಲ್ಲೆಯ ಪ್ರಭಾವಿ ರಾಜಕಾರಣಿಯ ಪುತ್ರನದ್ದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
7.21 ನಿಮಿಷ ಹಾಗೂ 12.41 ನಿಮಿಷದ ಎರಡು ಆಡಿಯೋಗಳು ಜಿಲ್ಲಾದ್ಯಂತ ಹರಿದಾಡುತ್ತಿವೆ. ಈ ಆಡಿಯೋದಲ್ಲಿರುವ ಧ್ವನಿ ಇಬ್ಬರು ಪ್ರಭಾವಿಗಳ ನಡುವೆ ನಡೆದದ್ದು ಎನ್ನಲಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಮೈತ್ರಿ ಅಭ್ಯರ್ಥಿ ಗೆಲುವಿಗಾಗಿ 150 ಕೋಟಿಗೂ ಹೆಚ್ಚು ವೆಚ್ಚ ಮಾಡುತ್ತಿರುವ ಹಾಗೂ ಪ್ರತಿ ಬೂತ್ಗೆ 5 ಲಕ್ಷ ಹಣ ಬಟವಾಡೆ ಮಾಡೋ ಧ್ವನಿ ಅದರಲ್ಲಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿರುವ 2800 ಬೂತ್ ಗಳಿದ್ದು, ಹಣ ಮಾತ್ರವಲ್ಲದೇ ಊರೂರಲ್ಲಿ ಮಟನ್ ಊಟವನ್ನೂ ಹಾಕಿಸಲು ಸಿದ್ದತೆ ಮಾಡಲಾಗಿದೆ ಎಂಬ ಸ್ಫೋಟಕ ವಿಚಾರ ಆಡಿಯೋದಲ್ಲಿದೆ. ಕಂಟ್ರಾಕ್ಟರ್ಗಳಿಗೆ ಚುನಾವಣೆ ಜವಾಬ್ದಾರಿ ಹೊರಿಸಲಾಗಿದ್ದು, ಪ್ರತಿ ಕಿ.ಮೀ.ಗೆ ಒಬ್ಬರಂತೆ ಕಂಟ್ರಾಕ್ಟರ್ ನೇಮಕ ಮಾಡಲಾಗಿದೆಯಂತೆ. ಇದರ ಜೊತೆಗೆ ಚುನಾವಣೆ ಬಳಿಕ ಕಂಟ್ರಾಕ್ಟರ್ಗಳಿಗೆ ಕೋಟಿ ಕೋಟಿ ಅನುದಾನ ನೀಡುವ ಯೋಜನೆ ರೂಪಿಸಲಾಗಿದೆ ಎಂಬ ಮಾಹಿತಿ ಈ ಅಡಿಯೋ ದಲ್ಲಿ ಬಹಿರಂಗವಾಗಿದೆ.
ನಿನ್ನೆಯಷ್ಟೇ ನಡೆದಿರುವ ದೂರವಾಣಿ ಸಂಭಾಷಣೆ ಎಂದು ಹೇಳಲಾಗಿದ್ದು, ಈ ಆಡಿಯೋ ಜಿಲ್ಲೆಯಲ್ಲಿ ಬಾರೀ ಸಂಚಲನ ಮೂಡಿಸಿದೆ. ಆದರೆ ಈ ಅಡಿಯೋ ಸತ್ಯಾಸತ್ಯತೆ ಕುರಿತಂತೆ ಯಾವುದೇ ಸ್ಪಷ್ಟನೆ ಇಲ್ಲವಾಗಿದೆ.