ಮಂಡ್ಯ: ತಮಿಳುನಾಡಿನ ಹೈಬ್ರೀಡ್ ಕೋಳಿಗಳನ್ನು ಜಿಲ್ಲೆಗೆ ತರುತ್ತಿರುವ ವ್ಯಾಪಾರಿಗಳು ಮಂಡ್ಯ ನಾಟಿ ಕೋಳಿ ಹೆಸರಲ್ಲಿ ಮಾರಾಟ ಮಾಡ್ತಿದ್ದಾರೆ. ಇದು ಅಪ್ಪಟ ನಾಟಿಕೋಳಿ ವ್ಯಾಪಾರಕ್ಕೆ ಮುಳುವಾಗಿದ್ದು, ರೈತರು ತಮಿಳುನಾಡು ಕೋಳಿ ಮಾರಾಟಗಾರರ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಮಂಡ್ಯದ ರೈತರು ಹೆಚ್ಚಾಗಿ ಭತ್ತ, ಕಬ್ಬು ಬೆಳೆದರೂ, ಉಪ ಕಸುಬಾಗಿ ನಾಟಿ ಕೋಳಿ ಸಾಕಾಣಿಕೆ ಮಾಡುತ್ತಾರೆ. ಒಂದು ನಾಟಿ ಕೋಳಿ ಬೆಳವಣಿಗೆಯಾಗಲು 100 ರಿಂದ 120 ದಿನಗಳು ಬೇಕಾಗುತ್ತದೆ. ಅಷ್ಟಾಗಿಯೂ ನಾಟಿ ಕೋಳಿಗಳ ತೂಕ ಒಂದೂವರೆ ಕೆ.ಜಿ ಬಂದರೇ ಹೆಚ್ಚು. ಆದರೆ, ತಮಿಳುನಾಡಿನಿಂದ ಬರುತ್ತಿರುವ ಕೋಳಿಗಳು ಕೇವಲ 50 ದಿನಗಳಲ್ಲಿ ಬೆಳವಣಿಗೆಯಾಗುತ್ತವೆ. ಈ ಕೋಳಿಗಳ ತೂಕ ಎರಡು ಎರಡೂವರೆ ಕೆ.ಜಿ ಬರುತ್ತದೆ. ಇದರಿಂದ ಹೈಬ್ರೀಡ್ ಕೋಳಿ ವ್ಯಾಪಾರಿಗಳು ಕಡಿಮೆ ಅವಧಿಯಲ್ಲಿ ಹೆಚ್ಚು ಸಂಪಾದಿಸಲು ಸಾಧ್ಯವಾಗುತ್ತದೆ. ಆದರೆ, ಕಡಿಮೆ ಅವಧಿಯಲ್ಲಿ ಕೋಳಿಗಳನ್ನು ಬೆಳೆಸಲು ಹಾಗೂ ಅದರ ತೂಕ ಹೆಚ್ಚಿಸಲು ಔಷಧ ನೀಡಲಾಗುತ್ತದೆ. ಅಂತಹ ಔಷಧ ನೀಡಿದ ಕೋಳಿಗಳನ್ನು ತಿಂದರೆ ಜನರ ಆರೋಗ್ಯ ಹದಗೆಡುತ್ತದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
ಓದಿ : ಲಾಂಗ್ನಿಂದ ಕೇಕ್ ಕಟ್ ಮಾಡಿ ಬರ್ತಡೇ ಸೆಲೆಬ್ರೇಷನ್: ವಿಡಿಯೋ ವೈರಲ್
ಅಪ್ಪಟ ನಾಟಿ ಕೋಳಿಗಳನ್ನು ಕೆ.ಜಿಗೆ 200 ರಿಂದ 300 ರೂಪಾಯಿಗೆ ಮಾರಲಾಗುತ್ತದೆ. ಆದರೆ, ತಮಿಳುನಾಡಿನಿಂದ ತಂದ ಹೈಬ್ರೀಡ್ ಕೋಳಿಗಳನ್ನು ಕೇವಲ 80 - 90 ರೂಪಾಯಿಗಳಿಗೆ ರಿಟೇಲ್ ವ್ಯಾಪಾರಿಗಳಿಗೆ ಮಾರುತ್ತಾರೆ. ಥೇಟ್ ನಾಟಿ ಕೋಳಿಗಳಂತೆ ಕಾಣುವ ಹೈಬ್ರೀಡ್ ಕೋಳಿಗಳನ್ನು ರಿಟೇಲ್ ವ್ಯಾಪಾರಿಗಳು ಜನರಿಗೆ ನಾಟಿ ಕೋಳಿ ಎಂದು ನಂಬಿಸಿ ಮಾರಾಟ ಮಾಡುತ್ತಾರೆ. ಅಪ್ಪಟ ನಾಟಿ ಕೋಳಿಗಳ ದರದಲ್ಲೇ ತಮಿಳುನಾಡು ಕೋಳಿಗಳನ್ನು ಮಾರಾಟ ಮಾಡುವುದರಿಂದ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಸಿಗ್ತಿದೆ. ಆದರೆ, ಗ್ರಾಹಕರು ಕೋಳಿ ವ್ಯಾಪಾರಿಗಳ ಮೋಸದಾಟಕ್ಕೆ ಬಲಿಯಾಗುತ್ತಿದ್ದಾರೆ.