ಮಂಡ್ಯ: ರೈತರ ಪರೇಡ್ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೊರಟ ಮಂಡ್ಯ ಜಿಲ್ಲೆಯ ರೈತರು ಮತ್ತು ಟ್ರ್ಯಾಕ್ಟರ್ಗಳನ್ನು ಪೊಲೀಸರು ತಡೆಹಿಡಿದಿದ್ದಾರೆ. ಮದ್ದೂರಿನ ಶಿವಪುರದ ಬಳಿ ರೈತರು ಸೇರಿ ಟ್ರ್ಯಾಕ್ಟರ್ಗಳನ್ನು ಮದ್ದೂರು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಪೊಲೀಸರ ತಡೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ವಾಗ್ವಾದ ನಡೆಸಿದ್ದಾರೆ.
ಮಂಡ್ಯ, ಶ್ರೀರಂಗಪಟ್ಟಣ, ಮಳವಳ್ಳಿ ಸೇರಿದಂತೆ ಈ ಭಾಗದ ರೈತರು ಬೆಂಗಳೂರಿನ ಪರೇಡ್ಗೆ ತೆರಳದಂತೆ ತಡೆದು ನಿಲ್ಲಿಸಿದ್ದು, ಪೊಲೀಸರ ಕ್ರಮ ಖಂಡಿಸಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಮಾತಿಗೆ ಮಣಿದು ಬರಿ ರೈತರನ್ನು ಮಾತ್ರ ಕಳಿಸಲು ಪೊಲೀಸರು ಅನುಮತಿ ನೀಡಿದ್ದು, ಟ್ರ್ಯಾಕ್ಟರ್ಗಳನ್ನು ಮದ್ದೂರಿನ ವೆಂಕಟೇಶ್ವರ ಸಮುದಾಯ ಭವನದಲ್ಲಿ ನಿಲ್ಲಿಸಿ ಬೆಂಗಳೂರಿನ ಕಡೆ ರೈತರು ಹೊರಟಿದ್ದಾರೆ.