ಮಂಡ್ಯ: ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಏಳನೇ ಬಾರಿಯೂ ಮುಂದೂಡಿಕೆಯಾಗಿದ್ದು, ಅನುದಾನ ಹಂಚಿಕೆ ಕುರಿತು ಜಿಪಂ ಅಧ್ಯಕ್ಷರು ಸರ್ಕಾರದ ಮೊರೆ ಹೋಗಲು ನಿರ್ಧಾರ ಮಾಡಿದ್ದಾರೆ.
ಜೆಡಿಎಸ್ ಸದಸ್ಯರ ಮುನಿಸಿಗೆ ಈ ಬಾರಿಯೂ ಸಭೆ ಬಲಿಯಾಗಿದ್ದು, ಹಣಕಾಸು ವರ್ಷದ ತ್ರೈಮಾಸಿಕ ಸಮಯ ಮುಗಿಯುವ ಹಂತಕ್ಕೆ ಬಂದರೂ ಬಜೆಟ್ ಮಂಡನೆಯೇ ಆಗಿಲ್ಲ. ಇಂದು ಕೂಡ ಅಧ್ಯಕ್ಷೆ ನಾಗರತ್ನ ಸ್ವಾಮಿ ಜಿಪಂ ಸಾಮಾನ್ಯ ಸಭೆಯನ್ನು ಕರೆದಿದ್ದರು. ಜೆಡಿಎಸ್‌ನಿಂದ ಗೆದ್ದು ಅಧ್ಯಕ್ಷರಾಗಿದ್ದರೂ ನಾಗರತ್ನ ಅವರ ಪತಿ ಸ್ವಾಮಿ ಬಿಜೆಪಿ ಸೇರಿದ ನಂತರ ಸಾಮಾನ್ಯ ಸಭೆ ಮುಂದೂಡುತ್ತಲೇ ಹೋಯಿತು. ಕಳೆದ ಆರು ಬಾರಿಯೂ ಕೋರಂ ಅಭಾವದಿಂದಾಗಿ ಸಭೆ ಮುಂದೂಡಿಕೆಯಾಗಿತ್ತು. ಇಂದು ನಡೆಯಬೇಕಾಗಿದ್ದ ಸಭೆಯನ್ನೂ ಕೋರಂ ಅಭಾವದಿಂದ ಮುಂದೂಡಲಾಯಿತು.
ಜಿಪಂ ಸಾಮಾನ್ಯ ಸಭೆ ಸೇರಿದಂತೆ ಜಿಪಂ ಬಜೆಟ್ ಕೂಡ ರದ್ದಾಗಿದೆ. ಹಣಕಾಸು ವರ್ಷದ ತ್ರೈಮಾಸಿಕವೂ ಕೊನೆಯ ಹಂತಕ್ಕೆ ಬಂದ ಹಿನ್ನೆಲೆ ಅನುದಾನ ಹಂಚಿಕೆ ಕುರಿತು ಸಹಾಯಕ್ಕಾಗಿ ಅಧ್ಯಕ್ಷರು ಸರ್ಕಾರದ ಮೊರೆ ಹೋಗಲು ನಿರ್ಧಾರ ಮಾಡಿದ್ದಾರೆ. ಹಣಕಾಸು ಆಯೋಗ ಹಾಗೂ ಸರ್ಕಾರದ ಅನುದಾನ ಕುರಿತು ಬಜೆಟ್ ಮಂಡನೆಯಾಗದ ಹಿನ್ನೆಲೆ ಅಧ್ಯಕ್ಷರು ಸರ್ಕಾರದ ಕದ ತಟ್ಟಿದ್ದಾರೆ.
ಮುಗಿಯಿತಾ ಅಧ್ಯಕ್ಷರ ಅವಧಿ: ಅಧ್ಯಕ್ಷರ ಅವಧಿ ಮುಗಿದಿದ್ದು, ಸಭೆ ಹೇಗೆ ಕರೆಯಲಾಗಿದೆ ಎಂದು ಕೆಲ ಸದಸ್ಯರು ಪ್ರಶ್ನೆ ಎತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಒಗೆ ಪತ್ರದ ಮೂಲಕ ಮಾಹಿತಿ ಕೇಳಿದ್ದಾರೆ. ಸದಸ್ಯರ ಹಾಗೂ ಅಧ್ಯಕ್ಷರ ನಡುವಿನ ಶೀತಲ ಸಮರಕ್ಕೆ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ, ಬಜೆಟ್ ಸಭೆ ಮುಂದೂಡಿಕೆಯಾಗುತ್ತಿದ್ದು, ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗಿದೆ.