ಮಂಡ್ಯ: ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಹರಸಾಹಸಪಡುತ್ತಿದೆ. ಸೋಂಕಿತರಿಗೆ ಹಾಸಿಗೆಗಳ ಕೊರತೆ ಇದೆ ಎಂದು ಆಗಾಗ ಆರೋಪಗಳು ಕೇಳಿ ಬರುತ್ತಿವೆ. ಆದರೆ, ಮಂಡ್ಯ ಜಿಲ್ಲೆಯ ಪರಿಸ್ಥಿತಿಯೇ ಭಿನ್ನವಾಗಿದೆ.
ಎಲ್ಲಾ ಕಡೆ ಕೊರೊನಾ ಸೋಂಕಿನ ಜೊತೆ ಜೊತೆಗೆ ಕೆಲವೊಂದು ಪೂರ್ವಾಗ್ರಹಗಳೂ ಕೂಡಾ ಜನರನ್ನು ಆವರಿಸಿಬಿಟ್ಟಿವೆ. ಕೊರೊನಾ ಸೋಂಕು ತಗುಲಿದರೆ ಆಸ್ಪತ್ರೆ ಸಿಗಲ್ಲ. ಹಾಸಿಗೆ ಸಿಗಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗದೇ ಮೃತಪಟ್ಟವರ ಕತೆಗಳು ಹೇರಳವಾಗಿ ಸಿಗುತ್ತಿವೆ. ಈ ಹಿನ್ನೆಲೆಯಲ್ಲಿ ಸೋಂಕು ಬಂದರೆ ಸಾವೇ ಬಂತು ಎಂಬ ಭಯದಲ್ಲಿ ಜನರಿದ್ದಾರೆ.
ಜಿಲ್ಲೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಾಸಿಗೆಗಳಿಲ್ಲ ಎಂದು ಆಸ್ಪತ್ರೆಗಳು ಪರದಾಡಿದರೆ, ಮಂಡ್ಯದಲ್ಲಿ ಆ ಸಮಸ್ಯೇನೇ ಎದುರಾಗಿಲ್ಲ. ಸೋಂಕಿತರನ್ನು ಹಾಗೂ ಶಂಕಿತರನ್ನು ಕ್ವಾರಂಟೈನ್ ಮಾಡಲು ಖಾಸಗಿ ಹೋಟೆಲ್ಗಳನ್ನು ಬಾಡಿಗೆಯೇ ಪಡೆದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಂಜೇಗೌಡ ಹೇಳಿದರು.
ಮೀಮ್ಸ್ ಆಸ್ಪತ್ರೆ ಸೇರಿ ಸರ್ಕಾರಕ್ಕೆ ಸೇರಿದ ಒಕ್ಕಲಿಗರ ಸಂಘದ ವಿದ್ಯಾರ್ಥಿನಿಲಯಗಳು, ಕುಟುಂಬ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳು ಮುಂತಾದವುಗಳಲ್ಲಿ ಚಿಕಿತ್ಸೆ ನೀಡಿ, ಕ್ವಾರಂಟೈನ್ಗೆ ಬಳಸಿಕೊಂಡಿರುವ ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದು, ಸರ್ಕಾರದ ಹಣ ಉಳಿತಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.