ಮಂಡ್ಯ: ಹೆತ್ತ ಮಕ್ಕಳನ್ನು ತಂದೆಯೇ ಭೀಕರವಾಗಿ ಕೊಲೆ ಮಾಡಿರುವ ಘೋರ ದುರಂತವೊಂದು ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದಲ್ಲಿ ಸುತ್ತಿಗೆಯಿಂದ ಹೊಡೆದು ತಂದೆಯೇ ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ರಾತ್ರಿ ನಡೆದಿದ್ದು, ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಶ್ರೀಕಾಂತ್ ಕೊಲೆಗೈದ ಪಾಪಿ ತಂದೆ.
3 ವರ್ಷದ ಮಗ ಹಾಗೂ 4 ವರ್ಷದ ಮಗಳನ್ನು ಸುತ್ತಿಗೆಯಿಂದ ಹೊಡೆದು ಕೊಲೆಗೈದ ಶ್ರೀಕಾಂತ್, ಬಳಿಕ ಪತ್ನಿ ಲಕ್ಷ್ಮೀ ಮೇಲೂ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಲಕ್ಷ್ಮೀಯನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮರಳಗಾಲ ಗ್ರಾಮದ ಆಲೆಮನೆಯಲ್ಲಿ ಶ್ರೀಕಾಂತ್ ಕುಟುಂಬ ಕೆಲಸ ಮಾಡುತ್ತಿತ್ತು. ಮೂಲತಃ ಇವರು ಕಲಬುರಗಿ ಜಿಲ್ಲೆಯ ಜೇವರ್ಗಿಯವರಾಗಿದ್ದು, ಕೆಲಸಕ್ಕಾಗಿ ಮರಳಗಾಲ ಗ್ರಾಮದಲ್ಲಿ ವಾಸವಾಗಿದ್ದರು. ಇಬ್ಬರು ಮಕ್ಕಳನ್ನು ಹತ್ಯೆ ಮಾಡಿ ಬಳಿಕ ಹೆಂಡತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬಳಿಕ ಶ್ರೀಕಾಂತ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆ ಕಾರಣ ತಿಳಿದುಬಂದಿಲ್ಲ. ಶ್ರೀಕಾಂತ್ ಬಂಧನದ ಬಳಿಕವಷ್ಟೇ ಪ್ರಕರಣದ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಕೊಲೆಗೈದ ಪಾಪಿಗೆ ಗಲ್ಲು ಶಿಕ್ಷೆ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಇದೀಗ ಗಾಯಗೊಂಡಿರುವ ಮಹಿಳೆ ಲಕ್ಷ್ಮೀಯ ತಂದೆ ಶಿವರಾಜು ಮತ್ತು ಆತನ ಪತ್ನಿ ಕಳೆದ ಹಲವು ದಿನಗಳಿಂದ ನಮ್ಮ ತೋಟದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಪತಿ ಕಿರುಕುಳ ನೀಡುತ್ತಿದ್ದಾನೆಂದು ಲಕ್ಷ್ಮೀ ತನ್ನ ಮಕ್ಕಳನ್ನು ಬಿಟ್ಟು ಇತ್ತೀಚೆಗಷ್ಟೇ ಇಲ್ಲಿಗೆ ಬಂದಿದ್ದಳು. ನಿನ್ನೆಯಷ್ಟೇ ಗಂಡ ಶ್ರೀಕಾಂತ್ ಕೂಡ ಮಕ್ಕಳೊಂದಿಗೆ ಆಗಮಿಸಿದ್ದ. ಆದರೆ, ಬೆಳಗಾಗುವಷ್ಟರಲ್ಲಿ ಈ ಘಟನೆ ನಡೆದಿದೆ. - ವಿರುಪಾಕ್ಷ, ಫಾರ್ಮ್ ಹೌಸ್ ಮಾಲೀಕ
ನಾನು ಬೇರೆ ಕಡೆ ಇರುವೆ. ಲಕ್ಷ್ಮೀ-ಶ್ರೀಕಾಂತ್ಗೆ 5 ವರ್ಷದ ಹಿಂದೆಯೇ ಮದುವೆಯಾಗಿದ್ದು ಅನ್ಯೋನ್ಯವಾಗಿದ್ದರು. ಇತ್ತೀಚೆಗೆ ದಂಪತಿ ನಡುವೆ ಸಣ್ಣ ಪ್ರಮಾಣದ ಜಗಳ ನಡೆಯುತ್ತಿತ್ತು. ಶ್ರೀಕಾಂತನ ತಂದೆ-ತಾಯಿ ಕೂಡ ಪುತ್ರಿ ಲಕ್ಷ್ಮೀ ಜೊತೆ ಹಾಗಾಗ್ಗೆ ಜಗಳ ತೆಗೆಯುತ್ತಿದ್ದರು. ಇದರಿಂದ ಬೇಸರಗೊಂಡ ಲಕ್ಷ್ಮೀ, ನಾವು ಕೆಲಸ ಮಾಡುತ್ತಿದ್ದ ಇಲ್ಲಿನ ಫಾರ್ಮ್ ಹೌಸ್ಗೆ ಬಂದಿದ್ದಳು. ಬಳಿಕ ಆಕೆಯ ಗಂಡನೂ ಬಂದಿದ್ದ. ಅಲ್ಲದೆ ತಾನು ಇಲ್ಲೇ ಇರ್ತೀನಿ ನನಗೂ ಕೆಲಸ ಕೊಡಿಸಿ ಅಂತ ಹೇಳಿದ್ದನು. ಆದರೆ, ಈ ಕೆಲಸ ಮಾಡಿ ಪರಾರಿಯಾಗಿದ್ದಾನೆ. - ಶಿವರಾಜು, ಮೃತ ಮಕ್ಕಳ ತಾತ
ಇದನ್ನೂ ಓದಿ: Honour killing: ಮರ್ಯಾದೆಗಾಗಿ ಪ್ರೇಮಿಗಳ ಕೊಂದು ಮೊಸಳೆಗಳಿದ್ದ ನದಿಗೆ ಶವ ಬಿಸಾಡಿದ ಕುಟುಂಬಸ್ಥರು!
ಹುಣಸೂರಲ್ಲಿ ಡಬಲ್ ಮರ್ಡರ್: ಮೈಸೂರು ಜಿಲ್ಲೆಯ ಹುಣಸೂರಿನಲ್ಲಿಯೂ ಇಂತಹದ್ದೇ ಜೋಡಿ ಕೊಲೆಗೈದ ಘಟನೆ ನಡೆದಿದೆ. ಪಟ್ಟಣದ ಪರಸಯ್ಯನ ಛತ್ರದ ಬಳಿಯ ಎಸ್ ಎನ್ ಶಾಮಿಲ್ನಲ್ಲಿ ಮಧ್ಯರಾತ್ರಿ ಈ ಡಬಲ್ ಮರ್ಡರ್ ನಡೆದಿದೆ. ವೆಂಕಟೇಶ್ (75) ಹಾಗೂ ಷಣ್ಮುಖ (65) ಕೊಲೆಗೀಡಾದವರು. ಮೃತರು ಶಾಮಿಲ್ನಲ್ಲಿ ಕೆಲಸ ಮಾಡುತ್ತಿದ್ದರು.
ಇಬ್ಬರೂ ಶಾಮಿಲ್ನಲ್ಲಿ ಪ್ರತಿನಿತ್ಯ ಬೆಳಗ್ಗೆ ಬೇಗ ಎದ್ದು ಕೆಲಸ ಮಾಡುತ್ತಿದ್ದರು. ಆದ್ರೆ ಇಂದು 7 ಗಂಟೆಯಾದ್ರೂ ಎದ್ದೇಳದ ಹಿನ್ನೆಲೆ ಅನುಮಾನಗೊಂಡು ಸ್ಥಳೀಯರು ಶಾಮಿಲ್ ಮಾಲೀಕರಿಗೆ ಮಾಹಿತಿ ನೀಡಿದ್ದರು. ಆ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಮೈಸೂರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ. ಶಾಮಿಲ್ನಲ್ಲಿ ಕಳ್ಳತನಕ್ಕೆ ಬಂದ ದುಷ್ಕರ್ಮಿಗಳು ಕೊಲೆ ಮಾಡಿ ಹೋಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Honour killing: ಮರ್ಯಾದೆಗಾಗಿ ಪ್ರೇಮಿಗಳ ಕೊಂದು ಮೊಸಳೆಗಳಿದ್ದ ನದಿಗೆ ಶವ ಬಿಸಾಡಿದ ಕುಟುಂಬಸ್ಥರು!