ಮಂಡ್ಯ: ಅನರ್ಹ ಶಾಸಕರ ಬಗೆಗಿನ ಸುಪ್ರೀಂಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆ ಮಂಡ್ಯದ ಕೆ.ಆರ್. ಪೇಟೆಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ರಂಗೇರಿದೆ.
ಅನರ್ಹತೆ ಶಿಕ್ಷೆ ಅನುಭವಿಸಿದ್ದ ಮಾಜಿ ಶಾಸಕ ಕೆ.ಸಿ. ನಾರಾಯಣಗೌಡ ಅವರು ಈ ಬಾರಿ ಹೊರೆ ಇಳಿಸಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಪೈಪೋಟಿ ನೀಡಲು ಕಾಂಗ್ರೆಸ್ನಿಂದ ಕೆ.ಪಿ. ಚಂದ್ರಶೇಖರ್ ಹಾಗೂ ಜೆಡಿಎಸ್ನಿಂದ್ ಬಿ.ಎಲ್. ದೇವರಾಜು ಅಣಿಯಾಗಿದ್ದಾರೆ.
ಜೆಡಿಎಸ್ನಲ್ಲಿ ಇದ್ದಾಗ ನಾರಾಯಣಗೌಡ ಅವರು ಪಕ್ಷದಲ್ಲಿ ತನ್ನದೆಯಾದ ಪಡೆ ಕಟ್ಟಿಕೊಂಡು ಈ ಹಿಂದೆ ದಾಖಲೆ ನಿರ್ಮಿಸಿದ್ದರು. ಮುಡಾ ಅಧ್ಯಕ್ಷ ಶ್ರೀನಿವಾಸ್, ಮನ್ಮುಲ್ನ ನಾಮ ನಿರ್ದೇಶಿತ ಸದಸ್ಯ ತಮ್ಮಣ್ಣ ಹಾಗೂ ಇವರ ಜೊತೆಗೆ ಬಿಜೆಪಿಯ ಪರಾಜಿತ ಅಭ್ಯರ್ಥಿ ಬೂಕವಳ್ಳಿ ಮಂಜು ಸಹ ನಾರಾಯಣಗೌಡರ ಬೆನ್ನಿಗೆ ನಿಂತಿದ್ದಾರೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿ 9 ಸಾವಿರ ಮತ ಪಡೆದುಕೊಂಡಿದ್ದರೇ ಜೆಡಿಎಸ್ನಿಂದ ಕಣಕಿಳಿದಿದ್ದ ನಾರಾಯಣಗೌಡರು 87,000 ಮತ ಪಡೆದು ಗೆಲುವ ಸಾಧಿಸಿದ್ದರು. ಯಾವುದೇ ಗೊಂದಲವಿಲ್ಲದೇ ಬಿಜೆಪಿ ಟಿಕೆಟ್ ಪಡೆದ ನಾರಾಯಣಗೌಡ, ಅವರ ಹಿಂದೆ ಬಿಜೆಪಿಯ ಕಾರ್ಯಕರ್ತರ ಪಡೆ ಗಟ್ಟಿಯಾಗಿ ನಿಂತಿದೆ. ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ, ಸಚಿವ ಮಾಧುಸ್ವಾಮಿ, ಶಾಸಕ ಪ್ರೀತಂ ಗೌಡ ಅವರಿಗೆ ಕ್ಷೇತ್ರದ ಚುನಾವಣಾ ಜವಾಬ್ದಾರಿ ನೀಡಿದ್ದು, ನಾರಾಯಣಗೌಡರ ಗೆಲುವಿನ ಆತ್ಮ ವಿಶ್ವಾಸ ಹೆಚ್ಚಾಗಿದೆ.
ಜೆಡಿಎಸ್ ಕಾರ್ಯಕರ್ತರಲ್ಲಿ ಕೆಲವರು ಮಾತ್ರವೇ ನಾರಾಯಣಗೌಡರ ಪರ ನಿಂತಿದ್ದಾರೆ. ಉಳಿದವರು ಜೆಡಿಎಸ್ನಲ್ಲೇ ಉಳಿದುಕೊಂಡು ತಮ್ಮ ಅಭ್ಯರ್ಥಿ ಪರವಾಗಿ ಕೆಲಸ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಜೆಡಿಎಸ್ ಈಗಾಗಲೇ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಲ್. ದೇವರಾಜು ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಕಾರ್ಯಕರ್ತರಾಗಿ ದುಡಿದ ದೇವರಾಜುಗೆ ಟಿಕೆಟ್ ನೀಡಿರುವುದು ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ನಿಂದ ಕೆ.ಬಿ. ಚಂದ್ರಶೇಖರ್ ಬಹುತೇಕ ಅಭ್ಯರ್ಥಿ ಆಗುವ ಸಾಧ್ಯತೆ ಇದೆ. ಕಾಂಗ್ರೆಸ್ ಉಸ್ತುವಾರಿಯಾಗಿ ಮಾಜಿ ಸಚಿವ ಚಲುವರಾಯಸ್ವಾಮಿಗೆ ಚುನಾವಣೆ ಜವಾಬ್ದಾರಿ ಹೊರಿಸಲಾಗಿದೆ. ಇದು ಜೆಡಿಎಸ್ಗೆ ಸಂಕಷ್ಟ ತಂದಿದ್ದು, ಇದರ ಜೊತೆಗೆ ಕೆ.ಆರ್. ಪೇಟೆಯ ಮಾಜಿ ಸ್ಪೀಕರ್ ಕೃಷ್ಣ ಅವರ ಬೆಂಬಲ ಯಾರಿಗೆ ಎಂಬುದು ಗೊಂದಲ ಉಂಟಾಗಿದೆ. ರಾಜಕೀಯವಾಗಿ ನಿವೃತ್ತಿ ಹೊಂದಿದ್ದರೂ ತಮ್ಮದೆ ಆದ ಕೆಲವು ಅಭಿಮಾನಿಗಳ ಬಳಗ ಹೊಂದಿದ್ದಾರೆ. ಇವರ ಪಾತ್ರವೂ ನಿರ್ಣಾಯಕವಾಗಿರಲಿದೆ. ಈಗಾಗಲೇ ನಾರಾಯಣಗೌಡರು ಮಾಜಿ ಸ್ಪೀಕರ್ ಕೃಷ್ಣರ ಜೊತೆ ಮಾತುಕತೆ ನಡೆಸುವುದರ ಜೊತೆಗೆ ಅವರನ್ನು ಸಭೆಯಲ್ಲಿ ಗುಣಗಾನ ಮಾಡುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಸ್ವಾಭಿಮಾನ ಯಾರಿಗೆ ಎಂಬ ಪ್ರಶ್ನೆಯೂ ಎದುರಾಗಿದೆ. ಸುಮಲತಾ ಅಂಬರೀಶ್ ಅವರು 'ನಾನು ತಟಸ್ಥ' ಎಂದು ಹೇಳುತ್ತಿದ್ದರೂ ರಾಜಕೀಯ ಶಕ್ತಿಗಾಗಿ ಯಾರಾದರೂ ಒಬ್ಬರಿಗೆ ತಮ್ಮ ಬೆಂಬಲ ಘೋಷಣೆ ಮಾಡಬೇಕಾಗಿದೆ. ಒಂದೊಮ್ಮೆ ಘೋಷಣೆ ಮಾಡದೇ ಇದ್ದರೂ ಪರೋಕ್ಷವಾಗಿ ತಮ್ಮ ಅಭಿಮಾನಿಗಳಿಗೆ ಸಂದೇಶ ನೀಡಬೇಕಾಗಿದ್ದು, ಇದೂ ನಿರ್ಣಾಯಕ ಘಟ್ಟವಾಗಲಿದೆ. ಒಟ್ಟಿನಲ್ಲಿ ಕ್ಷೇತ್ರದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವುದು ಮಾಜಿ ಸ್ಪೀಕರ್ ಕೃಷ್ಣ ಹಾಗೂ ಸಂಸದೆ ಸುಮಲತಾ ಅಂಬರೀಶ್ರ ನಿರ್ಧಾರ ಎನ್ನಲಾಗುತ್ತಿದ್ದು, ಇವರ ಶ್ರೀ ರಕ್ಷಯೇ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಲಿದೆ.