ಮಂಡ್ಯ: ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಕರ್ತವ್ಯಕ್ಕೆ ಹಾಜರಾಗದೇ ಸರ್ಕಾರಿ ವೈದ್ಯನೊಬ್ಬ ಕಳ್ಳಾಟವಾಡಿದ ಘಟನೆ ಮಂಡ್ಯ ಜಿಲ್ಲೆಯ ಹೊಳಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಹೊಳಲು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ನಿರ್ಲಕ್ಷ್ಯ ತೋರಿ ವಾರದಿಂದ ಕರ್ತವ್ಯಕ್ಕೆ ಗೈರಾಗಿದ್ದಾನೆ. ಒಂದು ವಾರದ ದಿನಚರಿಯಲ್ಲಿ ಒಮ್ಮೆ ಹಾಜರಾತಿ ಹಾಕಿ ಕಣ್ಮರೆಯಾಗಿದ್ದಾನೆ. ಸಾರ್ವಜನಿಕರು ಆಸ್ಪತ್ರೆಗೆ ಬಂದು ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಅನುಮತಿ ಪಡೆಯದೇ ಏಕಾಏಕಿ ರಜೆ ಹಾಕಿದ್ದಾನೆ. ಕಾರಣ ಕೇಳಿದರೆ ಅನಾರೋಗ್ಯದ ನೆಪ ಹೇಳುತ್ತಿದ್ದಾನೆ ಎಂದು ವೈದ್ಯಾಧಿಕಾರಿಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ವೈದ್ಯನ ನಿರ್ಲಕ್ಷ್ಯ ಇದೇ ಮೊದಲೇನಲ್ಲ, ಈ ಹಿಂದಿನಿಂದಲೂ ನಿರಂತರವಾಗಿ ಬೇಜವಾಬ್ದಾರಿ ತನ ಮೆರೆದಿದ್ದಾರೆ. ಜೆಡಿಎಸ್ ಜಿಲ್ಲಾಧ್ಯಕ್ಷನ ಸಂಬಂಧಿ ಎಂಬ ಅಹಂ ನಿಂದ ರಾಜಕೀಯ ಪ್ರಭಾವ ಬಳಸಿ, ಗೂಂಡಾವರ್ತನೆ ತೋರುತ್ತಿದ್ದಾನೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.