ಮಂಡ್ಯ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ಮಾಡಿರುವ ಘಟನೆ ಪಾಂಡವಪುರ ತಾಲೂಕಿನ ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ನಡೆದಿದೆ.
ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಸ್ವಾಮಿ ಎಂಬುವವರ ಮಗ ಧನಂಜಯ (22) ಕೊಲೆಯಾದ ಯುವಕ. ಲಕ್ಷ್ಮೀಸಾಗರ ಗ್ರಾಮದ ಸ್ವಾಮಿ ಅವರು ಪಾಂಡವಪುರ ಪಟ್ಟಣದಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದರು. ಇವರ ಮಗ ಧನಂಜಯ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದರು. ನಿನ್ನೆ ರಾತ್ರಿ ಎಂದಿನಂತೆ ಮೊಬೈಲ್ ಅಂಗಡಿಯನ್ನು ಮುಚ್ಚಿದ ಧನಂಜಯನನ್ನು ಐವರು ಯುವಕರು ನೀಲನಹಳ್ಳಿ ಗೇಟ್ ಬಳಿ ಇರುವ ಸರೋವರ ಹೋಟೆಲ್ಗೆ ಕರೆದೊಯ್ದು, ಆತನ ಜೊತೆ ಜಗಳ ತೆಗೆದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಶಂಕಿತ ಆರೋಪಿಗಳು ಅದೇ ಲಕ್ಷ್ಮಿಪುರ ಗ್ರಾಮದವರು. ರೋಹಿತ್, ದರ್ಶನ್, ಸುನೀಲ್, ಜಯರಾಂ ಹಾಗೂ ರಮೇಶ್ ಕೊಲೆ ಆರೋಪಿಗಳಾಗಿದ್ದು, ಈ ಪೈಕಿ ರಂಗಸ್ವಾಮಿ ಅವರ ಮಗ ರೋಹಿತ್ ಹಾಗೂ ಕೊಲೆಯಾದ ಧನಂಜಯನಿಗೆ ಹಳೇ ವೈಷ್ಯಮ್ಯ ಹೊಗೆಯಾಡುತ್ತಿತ್ತು ಎನ್ನಲಾಗಿದೆ.
ಈ ಇಬ್ಬರ ನಡುವೆ ಆಗಾಗ ಗಲಾಟೆಗಳು ಸಂಭವಿಸುತ್ತಿದ್ದವು. ಧನಂಜಯ ಇತ್ತೀಚಿನ ಕೆಲವು ದಿನಗಳ ಹಿಂದೆ ಗಲಾಟೆ ಸಂಬಂಧ ಜೈಲಿಗೆ ಹೋಗಿದ್ದು, ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಎನ್ನಲಾಗಿದೆ. ಮೇಲುಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ಕೇರ್ ಟೇಕರ್ ಕೆಲಸಕ್ಕೆ ಸೇರಿ ಮನೆಯಲ್ಲಿದ್ದ ಹಣ ಆಭರಣ ಕಳ್ಳತನ.. ಮಹಿಳೆ ಬಂಧನ