ಮೈಸೂರು: ''ದೇಶದ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಲು ದೆಹಲಿಯಲ್ಲಿ ಫೆ.13 ರಂದು ದೇಶದ ಎಲ್ಲ ರೈತ ಸಂಘಟನೆಗಳ ಮಹಾಸಂಗಮ ರ‍್ಯಾಲಿ ನಡೆಯಲಿದೆ'' ಎಂದು ದಕ್ಷಿಣ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಹೇಳಿದರು.
ಜಲದರ್ಶಿನಿ ಅತಿಥಿಗೃಹದಲ್ಲಿ ಇಂದು (ಗುರುವಾರ) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಈಗಾಗಲೇ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ದೇಶದ ವಿವಿಧ ರಾಜ್ಯಗಳಲ್ಲಿ 14 ಕಿಸಾನ್ ಮಹಾ ಪಂಚಾಯತ್ ಸಮಾವೇಶಗಳ ನಡೆಸಿ ರೈತರಲ್ಲಿ ಜಾಗೃತಿ ಮೂಡಿಸಲಾಗಿದೆ. ದೇಶದ ರೈತರನ್ನು ರಕ್ಷಣೆ ಮಾಡಲು ಕೇಂದ್ರ ಸರಕಾರ ವಿಶ್ವ ವ್ಯಾಪಾರ ಒಪ್ಪಂದದಿಂದ ಹೊರಗೆ ಬರಬೇಕು. ಕಬ್ಬಿನ ಎಫ್ಆರ್ಪಿ ದರವನ್ನು ಕನಿಷ್ಠ 4000 ರೂಪಾಯಿಗೆ ಏರಿಕೆ ಮಾಡಬೇಕು. 60 ವರ್ಷ ತುಂಬಿದ ರೈತರಿಗೆ ಕನಿಷ್ಠ 10,000 ರೂ. ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು. ಬೆಳೆ ವಿಮೆ ಪದ್ಧತಿ ಬದಲಾಯಿಸಬೇಕು. ಎಲ್ಲ ಬೆಳೆಗಳಿಗೂ ಬೆಳೆ ವಿಮೆ ಜಾರಿ ಆಗಬೇಕು ಎಂದು ಒತ್ತಾಯಿಸಲಾಗುವುದು'' ಎಂದರು.
''ಮುಖ್ಯಮಂತ್ರಿಯವರ ಕ್ಷೇತ್ರದಲ್ಲಿರುವ ಬಣ್ಣಾರಿ ಸಕ್ಕರೆ ಕಾರ್ಖಾನೆ ರಹದಾರಿ ನಿಯಮಗಳನ್ನು ಉಲ್ಲಂಘಿಸಿ, ಸರ್ಕಾರಕ್ಕೆ ಹಾಗೂ ರೈತರಿಗೆ ಹಲವಾರು ವಿಧದಲ್ಲಿ ಸುಳ್ಳು ಮಾಹಿತಿ ವರದಿ ಸಲ್ಲಿಸಿ ವಂಚನೆ ಮಾಡುತ್ತಿದೆ. ರಾಜ್ಯ ಸರ್ಕಾರ ಕೂಡಲೇ ದಕ್ಷ ಅಧಿಕಾರಿಗಳ ತಂಡ ರಚಿಸಿ, ತನಿಖೆ ನಡೆಸಿ ಸಕ್ಕರೆ ಕಾರ್ಖಾನೆಯನ್ನು ರಾಜ್ಯ ಸರಕಾರ ವಶಕ್ಕೆ ಪಡೆದು ರೈತರಿಗೆ ನ್ಯಾಯ ಕೊಡಿಸಬೇಕು'' ಎಂದು ಆಗ್ರಹಿಸಿದರು.
''ಸಹಕಾರಿ ವ್ಯವಸ್ಥೆಯಲ್ಲಿರುವ ಎಪಿಎಂಸಿ, ಸಹಕಾರಿ ಬ್ಯಾಂಕುಗಳು, ಹಾಲು ಉತ್ಪಾದಕರ ಸಂಸ್ಥೆಗಳ ಕಾರ್ಯನಿರ್ವಾಹಣೆಯಲ್ಲಿ ಸರ್ಕಾರದ ನಾಮನಿರ್ದೇಶನ ಪ್ರತಿನಿಧಿಗಳನ್ನು ನೇಮಕ ಮಾಡುವುದನ್ನು ಕೈಬಿಡಬೇಕು, ಸಂಸ್ಥೆಗಳು ದುರ್ಬಲವಾಗಲು ರಾಜಕೀಯ ಪ್ರವೇಶ ಕಾರಣವಾಗಿದೆ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು'' ಎಂದು ವಿವರಿಸಿದರು.
''ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ, ಇಂದಿನ ಮಾಧ್ಯಮ ಹಾಗೂ ಪ್ರಜಾತಂತ್ರ ವ್ಯವಸ್ಥೆ ಕುರಿತು ವಿಚಾರ ವಿಮರ್ಶ ಗೋಷ್ಠಿ ಜ.24 ರಂದು ಬೆಂಗಳೂರಿನ ಶಾಸಕರ ಭವನದ ಸಭಾಂಗಣದಲ್ಲಿ ನಡೆಯಲಿದೆ. ನಿವೃತ್ತ ನ್ಯಾಯಾಧೀಶರು, ಸಮಾಜ ಚಿಂತಕರು, ಮಾಧ್ಯಮ ಕ್ಷೇತ್ರದ ಚಿಂತಕರು ಗೋಷ್ಠಿಯಲ್ಲಿ ಭಾಗವಹಿಸಿ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ'' ಎಂದು ಅವರು ಮಾಹಿತಿ ನೀಡಿದರು.
ಅತ್ತಳ್ಳಿ ದೇವರಾಜ್, ಪಿ. ಸೂಮಶೇಖರ್, ಬರಡನಪುರ ನಾಗರಾಜ್, ಕಿರಗಸೂರ ಶಂಕರ, ರಂಗರಾಜು, ಮಾರ್ಬಳ್ಳಿ ನೀಲಕಂಠಪ್ಪ, ಬಸವರಾಜು, ಗೌರಿಶಂಕರ್, ವೆಂಕಟೇಶ ನಾಗೇಶ, ಪಟೇಲ್ ಶಿವಮೂರ್ತಿ, ರೇವಣ್ಣ, ಶಿವಣ್ಣ ಸುದ್ದಿಗೋಷ್ಠಿಯಲ್ಲಿ ಇದ್ದರು.
ಇದನ್ನೂ ಓದಿ: ಮಂಡ್ಯದಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿದರೂ ಗೆಲ್ಲುವ ವಾತಾವರಣ ಇದೆ: ಹೆಚ್.ಡಿ. ಕುಮಾರಸ್ವಾಮಿ