ಮಂಡ್ಯ: ಮಂಡ್ಯ ತಾಲೂಕಿನಲ್ಲಿ ಕೊರೊನಾ ಉಲ್ಬಣ ಹಿನ್ನೆಲೆ ಪ್ರತಿ ಗ್ರಾಮಗಳಿಗೆ ಶಾಸಕ ಎಂ ಶ್ರೀನಿವಾಸ್ ಸ್ಯಾನಿಟೈಸ್ ಸಿಂಪಡಣೆ ಮಾಡಿಸಲು ಮುಂದಾಗಿದ್ದಾರೆ.
ಶಾಸಕ ಎಂ.ಶ್ರೀನಿವಾಸ್ ಅವರು ಅಗ್ನಿಶಾಮಕದಳ, ತಾಲೂಕು ಆಡಳಿತ, ಗ್ರಾ.ಪಂ. ಸಹಕಾರದೊಂದಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಪ್ರತಿ ಗ್ರಾಮಗಳಿಗೆ ಸ್ಯಾನಿಟೈಸ್ ಸಿಂಪಡಣೆ ವ್ಯವಸ್ಥೆ ಮಾಡಿಸುತ್ತಿದ್ದಾರೆ. ಮಂಡ್ಯದ ಉಮ್ಮಡಹಳ್ಳಿ ಗ್ರಾಮದಲ್ಲಿ ಅಧಿಕೃತವಾಗಿ ಸ್ಯಾನಿಟೈಸ್ ಸಿಂಪಡಣೆಗೆ ಶಾಸಕ ಎಂ.ಶ್ರೀನಿವಾಸ್ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಮಂಡ್ಯ ತಾಲೂಕಿನಲ್ಲಿ 29 ಗ್ರಾಮಗಳು ಕಂಟೇನ್ಮೆಂಟ್ ಜೋನ್ ಆಗಿದ್ದು, ಮಂಡ್ಯ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಹಾಗೂ ನಗರ ಪ್ರದೇಶಗಳಿಗೆ ಸ್ಯಾನಿಟೈಸ್ ಸಿಂಪಡಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಎಲ್ಲಾ ಅಧಿಕಾರಿಗಳು ಒಟ್ಟುಗೂಡಿ ಕೆಲಸ ಮಾಡ್ತಿದ್ದಾರೆ. ಸಾರ್ವಜನಿಕರು ಸಹ ಮನೆಯಲ್ಲೇ ಇದ್ದು ಸಹಕರಿಸಿ ಕೊರೊನಾ ನಿಯಂತ್ರಿಸಬೇಕು ಎಂದ ಅವರು, ಯಾರೂ ಸಹ ಅನಾವಶ್ಯಕವಾಗಿ ಮನೆಯಿಂದ ಹೊರಬರದಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಚಂದ್ರಶೇಖರ್ ಶಂಗಾಳಿ, ಜಿ.ಪಂ.ಸದಸ್ಯ ಯೋಗೇಶ್, ಟಿಹೆಚ್ಒ ಸೇರಿದಂತೆ ಹಲವರು ಭಾಗಿಯಾಗಿದ್ದರು.