ಆನೇಕಲ್(ಬೆಂಗಳೂರು): ಮಂಡ್ಯ ಮೂಲದ ಒಂದೇ ಊರಿನ ಇಬ್ಬರು ಪ್ರೇಮಿಗಳು ಹೆಬ್ಬಗೋಡಿಯ ಬಾಡಿಗೆ ಮನೆಯಲ್ಲಿ ಸಾವಿಗೀಡಾಗಿದ್ದಾರೆ. ಕಾಲೇಜಿನಲ್ಲಿ ಓದುತ್ತಿರುವಾಗಲೇ ಪ್ರೀತಿಸುತ್ತಿದ್ದ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳ ಸಮೀಪದ ಚೌಡಸಮುದ್ರ ಗ್ರಾಮದ ನೇತ್ರಾವತಿ ಹಾಗೂ ಮಲ್ಲಿಕಾರ್ಜುನ್ ಮೃತರೆಂದು ತಿಳಿದುಬಂದಿದೆ.
ಹೆಬ್ಬಗೋಡಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನೇತ್ರಾವತಿ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದರು. ಹೆಬ್ಬಗೋಡಿಯ ವಿಶ್ವನಾಥ್ ಮಾಲಿಕತ್ವದ ಬಾಡಿಗೆ ಮನೆಯಲ್ಲಿ ಇಬ್ಬರ ಮೃತದೇಹಗಳು ದೊರೆತಿವೆ.
ಕಳೆದ ಭಾನುವಾರ ನೇತ್ರಾವತಿಯನ್ನು ಭೇಟಿ ಮಾಡಲು ಮಲ್ಲಿಕಾರ್ಜುನ್ ಹೆಬ್ಬಗೋಡಿಯ ಮನೆಗೆ ಬಂದಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಗಲಾಟೆ ಉಂಟಾಗಿದ್ದು, ಯುವಕ ಯುವತಿಯ ಹಲ್ಲೆ ನಡೆಸಿದ್ದಾನೆ. ಹೀಗಾಗಿ, ಆಕೆ ಕುಸಿದು ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಇದೆ. ಪ್ರೇಯಸಿಯ ಸಾವಿನಿಂದ ಆಘಾತಗೊಂಡ ಮಲ್ಲಿಕಾರ್ಜುನ್ ಕೂಜಾ ಅದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ನೇತ್ರಾವತಿ ಕೆಲಸಕ್ಕೆ ಹೋಗದೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದು ಕಂಪನಿ ನೌಕರ ಮನೆಗೆ ಬಂದು ನೋಡಿದಾಗ ಇಬ್ಬರ ಶವ ಕಂಡುಬಂದಿದೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ, ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೆರೆಗೆ ಬಿದ್ದು ಪ್ರೇಮಿಗಳಿಬ್ಬರ ಆತ್ಮಹತ್ಯೆ.. ಕಾರಣ ನಿಗೂಢ