ಮಂಡ್ಯ: ಸಿದ್ದು- ವಿಶ್ವನಾಥ್ ಮಾತಿನ ಸಮರ ವಿಚಾರವಾಗಿ ಅಸಮಾಧಾನ ಹೊರ ಹಾಕಿರುವ ಸಚಿವ ಸಿ.ಎಸ್.ಪುಟ್ಟರಾಜು, ಮೈತ್ರಿ ಧರ್ಮ ಪಾಲಿಸೋ ನಿಟ್ಟಿನಲ್ಲಿ ನಾವೆಲ್ಲ ನಡೆದುಕೊಂಡು ಬಂದಿದ್ದೀವಿ. ವಿಶ್ವನಾಥ್ ಪಕ್ಷದ ಅಧ್ಯಕ್ಷರಾಗಿ ದೇವೇಗೌಡರ ಜೊತೆ ಸಮಾಲೋಚಿಸಿ ಮಾತಾಡೋದು ಸೂಕ್ತ ಎಂದು ಸಲಹೆ ನೀಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಶ್ವನಾಥ್, ಸಿದ್ದರಾಮಯ್ಯ ಸಮಕಾಲೀನರು, ಒಂದೇ ಪಾರ್ಟಿಯಲ್ಲಿದ್ದವರು. ಹೀಗಾಗಿ ಆ ರೀತಿ ಮಾತಾಡಿರಬಹುದು. ನಮ್ಮ ಪಕ್ಷದ ಯಾರೂ ಮೈತ್ರಿ ಧರ್ಮಕ್ಕೆ ಧಕ್ಕೆಯಾಗುವ ನಿಟ್ಟಿನಲ್ಲಿ ಮಾತಾಡುವ ಪ್ರಶ್ನೆಯೇ ಇಲ್ಲ ಎಂದರು. ಸಿಎಂ ಬಗ್ಗೆ ಕಾಂಗ್ರೆಸ್ ಮುಖಂಡರ ಹೇಳಿಕೆ ವಿಚಾರವಾಗಿ ಈಗಾಗಲೇ ಕಾಂಗ್ರೆಸ್ ನಾಯಕರ ಗಮನಕ್ಕೆ ತಂದಿದ್ದೇವೆ. ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಸೂಚನೆಗೆ ವಿನಂತಿ ಮಾಡ್ತೇವೆ. ಮುಂದೆ ಈ ರೀತಿ ಮಾತಾಡದಂತೆ ಸೂಚನೆ ಕೊಡುವಂತೆ ವಿನಂತಿ ಮಾಡುತ್ತೇವೆ ಎಂದರು.
ಯಾವುದೇ ಷರತ್ತು ಹಾಕದೆ ಕಾಂಗ್ರೆಸ್ ನಾಯಕರೇ ಕುಮಾರಸ್ವಾಮಿ ಅವ್ರನ್ನ ಸಿಎಂ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲಿ ಎಂಬ ಮಾತು ಈ ಐದು ವರ್ಷಕ್ಕೆ ಅನ್ವಯಿಸಲ್ಲ. ಮುಂದಿನ ಸಲ ಕಾಂಗ್ರೆಸ್ ಪಕ್ಷ ಬಹುಮತ ಪಡೆದರೆ ಸಿದ್ದರಾಮಯ್ಯ ಅವರನ್ನ ಮುಖ್ಯಮಂತ್ರಿ ಮಾಡಲಿ. ಆಗ ನಮಗೆ ಬೇಡ ಎನ್ನುವ ಹಕ್ಕು ಇರಲ್ಲ ಎಂದರು.
ಕುಂದಗೋಳ, ಚಿಂಚೋಳಿ ಉಪಚುನಾವಣೆಯಲ್ಲಿ ಸಿಎಂ ಹೆಚ್ಡಿಕೆ ಪ್ರಚಾರ ಮಾಡಲಿದ್ದಾರೆ. ಬಿಜೆಪಿಯವರು ಮೊದಲು ಮೋದಿ ಅವರನ್ನ ಉಳಿಸಿಕೊಳ್ಳಲಿ, ಆ ನಂತರ ಸಮ್ಮಿಶ್ರ ಸರ್ಕಾರದ ಬಗ್ಗೆ ಚಿಂತೆ ಮಾಡಲಿ ಎಂದು ಸಲಹೆ ನೀಡಿದರು. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಕಾಂಗ್ರೆಸ್-ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಅವರು ಆಪರೇಷನ್ ಮಾಡಿದ್ರೆ, ನಾವು ಕಡ್ಲೆ ತಿನ್ನುತ್ತಿರಲ್ಲ. ನಾವು ರಾಜಕಾರಣವನ್ನೇ ಮಾಡೋದು ಎಂದು ಎಚ್ಚರಿಕೆ ನೀಡಿದರು.
ಸಿಎಂ ಯಾವುದೇ ಸರ್ವೆ ಮಾಡಿಸಿಲ್ಲ. ನೂರಕ್ಕೆ ಇನ್ನೂರರಷ್ಟು ಮಂಡ್ಯದಲ್ಲಿ ನಿಖಿಲ್ ಗೆಲ್ತಾರೆ. ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಮಂಡ್ಯ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಪ್ರಭಾವ ಬೀರಲ್ಲ. ನಿಖಿಲ್ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಲಿದ್ದಾರೆ ಎಂದರು. ಲೋಕಸಭಾ ಸದಸ್ಯರ ನೇತೃತ್ವದಲ್ಲಿ ಮಂಡ್ಯವನ್ನ ಸರ್ವಾಂಗೀಣ ಅಭಿವೃದ್ಧಿ ಮಾಡಲಿಕ್ಕೆ ಎಂಟು ಶಾಸಕರು, ಮೂರು ಸಚಿವರು ಸಹಕರಿಸಲಿದ್ದೇವೆ ಎಂದರು.