ಮಂಡ್ಯ: ಜಿಲ್ಲೆಯಲ್ಲಿ ಚಿರತೆಗಳ ಉಪಟಳ ಹೆಚ್ಚಾಗಿದ್ದು, ರಾತ್ರಿ ವೇಳೆ ರೈತರಿಗೆ ಕಾಣಿಸಿಕೊಳ್ಳುವುದರ ಜೊತೆಗೆ ಗ್ರಾಮಗಳಿಗೆ ಲಗ್ಗೆ ಇಡುತ್ತಿವೆ. ಇದರಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ರಾತ್ರಿ ದಾಳಿ ಮಾಡಿರುವ ಚಿರತೆ, ಚೈನ್ನಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಬೇಟೆಯಾಡಲು ಮುಂದಾಗಿದೆ. ಇದಕ್ಕೆ ನಾಯಿ ಪ್ರತಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಬಿಟ್ಟು ಪರಾರಿಯಾಗಿದೆ. ನಾಯಿ ಬೇಟೆಗೆ ಬಂದ ಚಿರತೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಕ್ಷಣ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
ಇನ್ನು ಮದ್ದೂರು ತಾಲೂಕಿನ ಸಿಂಗಟಗೆರೆ ಬಳಿ ರೈತರಿಗೆ ಚಿರತೆ ಕಾಣಿಸಿಕೊಂಡಿದೆ. ಜಮೀನಿಗೆ ನೀರು ಹಾಯಿಸಲು ಹೋದ ಸಂದರ್ಭದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಬೆಳಕಿನ ಸಹಾಯದಿಂದ ಮೊಬೈಲ್ನಲ್ಲಿ ಚಿರತೆಯ ಓಡಾಟವನ್ನು ಸೆರೆ ಹಿಡಿಯಲಾಗಿದೆ. ರೈತರು ರಾತ್ರಿ ವೇಳೆ ಕೆಲಸ ಮಾಡಲು ಭಯಪಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯುವಂತೆ ಒತ್ತಾಯ ಮಾಡಿದ್ದಾರೆ.