ಮಂಡ್ಯ: ಜಿಲ್ಲೆಯ ಬರಪೀಡಿತ ತಾಲೂಕು ನಾಗಮಂಗಲದಲ್ಲಿ ಬಹುತೇಕ ಕೆರೆಗಳು ನೀರು ಕಂಡು 16 ವರ್ಷಗಳೇ ಕಳೆದು ಹೋಗಿತ್ತು. ಈ ಬಾರಿ ಸುರಿಯುತ್ತಿರುವ ಮಳೆ ಕೆರೆಗಳ ನೀರಿನ ಬರವನ್ನು ನೀಗಿಸಿದೆ. ಹೀಗಾಗಿ ಸ್ಥಳೀಯ ಶಾಸಕರು ಸೇರಿದಂತೆ ತಾಲೂಕಿನ ಜನತೆ ಕೆರೆ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ.
ನಾಗಮಂಗಲ ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿರುವುದರಿಂದ ಪಟ್ಟಣದಲ್ಲಿ ಆಂಜನೇಯ, ದೊಡ್ಡತಾಯಮ್ಮ ಹಾಗೂ ಅಯ್ಯಪ್ಪ ಮೂರ್ತಿಯ ವಿಗ್ರಹಗಳ ಮೆರವಣಿಗೆ ಮಾಡಿ ನಂತರ ಪಟ್ಟಣದ ಹಿರಿ ಕೆರೆಯಲ್ಲಿ ತೆಪ್ಪೋತ್ಸವವವನ್ನು ಮಾಡಿ, ಪಟಾಕಿ ಸಿಡಿಸಿ ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ಕೆರೆ ಹಬ್ಬದಲ್ಲಿ ಶಾಸಕ ಸುರೇಶ್ ಗೌಡ, ತಹಶೀಲ್ದಾರ್ ರೂಪ ಸೇರಿದಂತೆ ಹಲವರು ಪಾಲ್ಗೊಂಡು, ಸಾಮಾನ್ಯ ಜನರ ನಡುವೆ ಕುಳಿತು ಕೆರೆ ಹಬ್ಬವನ್ನು ವೀಕ್ಷಿಸಿದ್ದಾರೆ.
ಈ ವರ್ಷದ ಮಳೆ ಇಲ್ಲಿನ ಜನರಲ್ಲಿ ಹೊಸ ಭರವಸೆ ಮೂಡಿಸಿದೆ. ಕೆರೆಗಳು ತುಂಬಿರೋದ್ರಿಂದ ಅಂತರ್ಜಲ ತುಂಬಿ ಬೆಳೆ ಸಮರ್ಪಕವಾಗಿ ಬೆಳೆಯಬಹುದು ಎಂಬ ಸಂತೋಷದಲ್ಲಿದ್ದಾರೆ. ನಾಗಮಂಗಲದಲ್ಲಿ ಸಾವಿರಾರು ಜನ ಹಬ್ಬದ ರೀತಿಯಲ್ಲಿ ಮನೆಯನ್ನು ಸ್ವಚ್ಛಗೊಳಿಸಿ, ಹಬ್ಬದ ಊಟವನ್ನು ಸವಿದಿದ್ದಾರೆ.