ಮಂಡ್ಯ: ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸ್ಪೋಟ ಸಂಭವಿಸಿದ್ದು, ಕಾರ್ಮಿಕನೊಬ್ಬ ಸಾವಿಗೀಡಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಚೆನ್ನಕೆರೆ ಗ್ರಾಮದ ಬಳಿ ತಡರಾತ್ರಿ ನಡೆದಿದೆ.
ಕಳೆದ ರಾತ್ರಿ ಅಕ್ರಮವಾಗಿ ಕಲ್ಲು ಗಣಿಗಾರಿಕೆಗಾಗಿ ಕುಳಿ ತೋಡುತ್ತಿದ್ದಾಗ ಸ್ಫೋಟಕ ಸಿಡಿದಿದೆ ಎನ್ನಲಾಗಿದೆ. ಈ ಸ್ಪೋಟದ ಭೀಕರತೆಗೆ ಸ್ಥಳದಲ್ಲಿದ್ದ ಕೊಳ್ಳೇಗಾಲ ಮೂಲದ ಕಾರ್ಮಿಕ ರಾಜು ಸಾವಿಗೀಡಾಗಿದ್ದಾರೆ. ಇದೇ ವೇಳೆ ತಂಗವೇಲು ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಪ್ರಕರಣ ಮುಚ್ಚಿಹಾಕಲು ಕ್ವಾರಿ ಮಾಲೀಕರ ಯತ್ನ ಆರೋಪ
ಕಲ್ಲು ಕ್ವಾರಿ ಮಾಲೀಕನಿಂದ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ನಡೆದಿದ್ದು, ಬಡ ಕಾರ್ಮಿಕನ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ಧನ ನೀಡುವುದಾಗಿ ಹೇಳಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಜೊತೆಗೆ ಪ್ರಕರಣವನ್ನು ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರದೆ ಗೌಪ್ಯವಾಗಿ ಶವ ಸಂಸ್ಕಾರ ಮಾಡಲು ಮಾಲೀಕ ಮುಂದಾಗಿದ್ದಾರೆ ಎನ್ನಲಾಗಿದೆ.
ಕಾರ್ಮಿಕನ ಶವ ವಶಕ್ಕೆ ಪಡೆಯಲು ತಾಲ್ಲೂಕು ಆಡಳಿತ ಕ್ರಮ:
ಮೃತ ಕಾರ್ಮಿಕನ ಶವವನ್ನು ವಶಕ್ಕೆ ಪಡೆದು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ತಾಲ್ಲೂಕು ಆಡಳಿತ ನಿರ್ಧರಿಸಿದೆ. ಆದರೆ ಶವ ಎಲ್ಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕ್ವಾರಿ ಕೆಲಸ:
ಶ್ರೀರಂಗಪಟ್ಟಣ ತಾಲ್ಲೂಕಿನ ಚನ್ನನಕೆರೆ ಸರ್ವೆ ನಂಬರ್ 78ರ ಭೂಮಿ ಮೀಸಲು ಅರಣ್ಯ ಪ್ರದೇಶವಾಗಿದೆ. ಇಲ್ಲಿ ರಾತ್ರಿ ಸಮಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ನಂಜೇಗೌಡ ಎಂಬವರು ಗಣಿಗಾರಿಕೆ ನಡೆಸುತ್ತಿದ್ದು, ಗಣಿಯಲ್ಲಿ ಸ್ಫೋಟಕ ಸಿಡಿದು ಘಟನೆ ನಡೆದಿದೆ ಎಂದು ಸ್ಥಳೀಯರು ದೂರಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್ ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಸಾಕ್ಷ್ಯ ನಾಶ ಮಾಡಿರುವ ಕುರುಹು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗಿದೆ.