ಮಂಡ್ಯ: ಮಂಡ್ಯ ಬಿಜೆಪಿಯಲ್ಲಿ ಈಗ ಢವ ಢವ ಶುರುವಾಗಿದೆ. ಸಚಿವ ಮಾಧುಸ್ವಾಮಿ ನೀಡಿದ್ದಾರೆ ಎನ್ನಲಾದ ವಿವಾದಿತ ಹೇಳಿಕೆ ರಾಜ್ಯ ಕುರುಬ ಸಮುದಾಯವನ್ನು ಕೆರಳಿಸಿದೆ. ಇತ್ತ ಜಿಲ್ಲೆಯ ಬಿಜೆಪಿ ಅಭ್ಯರ್ಥಿಯಲ್ಲೂ ತಳಮಳ ಉಂಟುಮಾಡಿದೆ.
ಹೊಸದುರ್ಗದ ಕಾಗಿನೆಲೆ ಶಾಖಾ ಮಠದ ಈಶ್ವರಾನಂದ ಸ್ವಾಮೀಜಿಗೆ ಅವಹೇಳನ ಮಾಡಿರುವ ಆರೋಪ ಎದುರಿಸುತ್ತಿರುವ ಸಚಿವ ಮಾಧುಸ್ವಾಮಿ ವಿರುದ್ಧ ರಾಜ್ಯದ ಕುರುಬ ಸಮಾಜವೇ ಕೆರಳಿದೆ. ಕೆ.ಆರ್.ಪೇಟೆ ಉಪಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ಮಾಧುಸ್ವಾಮಿಗೆ ಕುರುಬ ಸಮುದಾಯ ಸಭೆ ಮಾಡಿ ಘೇರಾವ್ ಮಾಡಲು ನಿರ್ಧಾರ ಮಾಡಿದ್ದು, ಈ ವಿಚಾರ ಈಗ ಜಿಲ್ಲಾ ಬಿಜೆಪಿ ಮುಖಂಡರ ನಿದ್ದೆಗೆಡಿಸಿದೆ.
ಅತ್ತ ಮುಖಂಡರು ಸಭೆ ಮಾಡಿ ಕಪ್ಪು ಬಾವುಟ ಪ್ರದರ್ಶನ ಹಾಗೂ ಘೇರಾವ್ ಹಾಕೋದಾಗಿ ಹೇಳುತ್ತಿದ್ದಂತೆ, ಇತ್ತ ಸಿಎಂ ಯಡಿಯೂರಪ್ಪ ಕ್ಷಮೆ ಯಾಚಿಸಿದ್ದಾರೆ, ಮಾಧುಸ್ವಾಮಿ ಕ್ಷಮೆ ಕೋರಿದ್ದಾರೆ, ಆದರೂ ಎಲ್ಲಿ ಮತದಾನ ವೇಳೆ ಈ ಪ್ರಕರಣ ಪ್ರಭಾವ ಬೀರಬಹುದು ಎಂಬ ಆತಂಕ ಬಿಜೆಪಿ ಅಭ್ಯರ್ಥಿಗೆ ಶುರುವಾಗಿದೆ.