ಮಂಡ್ಯ: ನಾವೂ ಜೆಡಿಎಸ್ ಪಕ್ಷ ಬಿಟ್ಟ ಸಂದರ್ಭದಲ್ಲಿ ನಮ್ಮನ್ನು ರೇವಣ್ಣ ಶನಿ ಅಂದಿದ್ರು, ನಿಜವಾದ ಶನಿ ಯಾರು ಎಂಬುದು ಈಗ ಗೊತ್ತಾಗಿದೆ ಎಂದು ರೇವಣ್ಣಗೆ ಮಾಜಿ ಶಾಸಕ ಬಾಲಕೃಷ್ಣ ಟಾಂಗ್ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಬಾಲಕೃಷ್ಣ ಹಾಗೂ ಮಾಜಿ ಸಚಿವ ಚಲುವರಾಯಸ್ವಾಮಿ, ಶನಿಗಳು ಪಕ್ಷ ಬಿಟ್ಟು ಹೋಗ್ತಾರೆ ಅಂತಾ ರೇವಣ್ಣ ಹೇಳಿದ್ದರು, ಈಗ ಎಲ್ಲರೂ ರೇವಣ್ಣರ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾದರೆ ನಿಜವಾದ ಶನಿ ಯಾರು? ಜೆಡಿಎಸ್ ಪಕ್ಷದ ಈ ದುಸ್ಥಿತಿಗೆ ಕಾರಣ ರೇವಣ್ಣ. ವಾಜಪೇಯಿ 26 ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ನಿಭಾಯಿಸಿದ್ರು. ಆದರೆ ಇವರ ಕೈಯಲ್ಲಿ ಒಂದು ಪಕ್ಷದ ಶಾಸಕರನ್ನು ನಿಭಾಯಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಲೇವಡಿ ಮಾಡಿದರು.
ಇದಕ್ಕೆಲ್ಲ ನೇರ ಹೊಣೆ ಕುಮಾರಸ್ವಾಮಿ:
ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಮತ್ತೆ ಆಕ್ರೋಶ ಹೊರಹಾಕಿದ ಮಾಜಿ ಸಚಿವ ಚಲುವರಾಯಸ್ವಾಮಿ, ಮಂಡ್ಯದಲ್ಲಿ ನೀರಿಗಾಗಿ ರೈತರು ಹೋರಾಟ ಮಾಡುತ್ತಿದ್ದಾರೆ. ಈ ಜಿಲ್ಲೆಯ ಜನರ ಬಗ್ಗೆ ಸರ್ಕಾರದ ತೀರ್ಮಾನ ಏನು? ಕುಮಾರಸ್ವಾಮಿ ಮಂಡ್ಯ ಜನರ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಜಿಲ್ಲೆಯಲ್ಲಿರುವ ಶಾಸಕರು, ಮಂತ್ರಿಗಳು ಜನರು, ಸರ್ಕಾರದ ಜೊತೆ ಚರ್ಚೆ ಮಾಡಿ ಜಿಲ್ಲೆಯ ಸಮಸ್ಯೆ ಪರಿಹರಿಸಲು ತೀರ್ಮಾನ ತೆಗೆದುಕೊಳ್ಳುತ್ತಿದ್ದರು, ಈಗ ಪ್ರಾಧಿಕಾರದ ಕಡೆ ಕೈ ತೋರಿಸುತ್ತಾರೆ. ಆದರೆ ನೀರು ಕೊಡಲು ನಿಮ್ಮ ಪ್ರಯತ್ನ ಏನು? ಮಳೆಯಾಗುವ ನಿರೀಕ್ಷೆಯಿರುವುದರಿಂದ ನಮ್ಮ ರೈತರಿಗೆ ನೀರು ಕೊಟ್ಟು, ತಮಿಳುನಾಡಿಗೂ ಕೊಡುವ ಅವಕಾಶ ಇದೆ. ಜಿಲ್ಲೆಯ ಜನರ ಬಗ್ಗೆ ನಿಮಗೆ ದ್ವೇಷ ಇದೆಯಾ? ರಾಜಕಾರಣ ಏನಾದರೂ ಮಾಡಿ, ಪಕ್ಷಕ್ಕಿಂತ ಹೆಚ್ಚು ನಮಗೆ ಜಿಲ್ಲೆಯ ಜನರ ಬಗ್ಗೆ ಕಾಳಜಿ ಇದೆ. ಸ್ವಾತಂತ್ರ್ಯ ನಂತರ ಮಂಡ್ಯ ಜಿಲ್ಲೆ ಬಗ್ಗೆ ಇಷ್ಟು ತಾತ್ಸಾರ ನೋಡಿಲ್ಲ. ಕುಮಾರಸ್ವಾಮಿ ನನ್ನನ್ನೇನು ಕೇಳ್ತೀರಿ ಡೆಲ್ಲಿಗೆ ಹೋಗಿ ಅಂತಾರೆ. ಹಾಗಾದ್ರೆ ಇವರು ಯಾಕೆ ಇದ್ದಾರೆ? ಜಿಲ್ಲೆಯ ಬಗ್ಗೆ ಇವರಿಗೆ ಏನು ಗೌರವ ಇದೆ? ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ ಆಗಿ ಮುಂದುವರಿಯಲು ವಹಿಸುವ ಕಾಳಜಿಯಷ್ಟೇ ಜಿಲ್ಲೆಯ ಜನರ ಬಗ್ಗೆಯೂ ಕಾಳಜಿ ವಹಿಸಲಿ. ಶಾಸಕರ ರಾಜೀನಾಮೆ ವಿಚಾರವಾಗಿ ಈ ರೀತಿಯ ರಾಜಕಾರಣ ಎಂದೂ ನೋಡಿಲ್ಲ, ಮುಂದೆ ನೋಡುವ ಪರಿಸ್ಥಿತಿ ಬರೋದು ಬೇಡ. 48 ಗಂಟೆಗಳಲ್ಲಿ ಕೋರ್ಟ್ ತೀರ್ಪಿದೆ. ಆ ನಂತರ ಏನಾಗುತ್ತೆ ನೋಡೋಣ. ನಾನೊಬ್ಬ ಕಾಂಗ್ರೆಸ್ ಲೀಡರ್ ಆಗಿರೋದ್ರಿಂದ ಸರ್ಕಾರದ ಬಗ್ಗೆ ನನ್ನ ನಿಜವಾದ ಅಭಿಪ್ರಾಯ ಹೇಳಲು ಆಗಲ್ಲ. ಇಂದಿನ ಈ ಸ್ಥಿತಿಗೆ ಮುಖ್ಯಮಂತ್ರಿಗಳೇ ಕಾರಣ. ರೇವಣ್ಣ ಅವರನ್ನೇ ಸಚಿವ ಸ್ಥಾನದಿಂದ ಹೊರಗಿಟ್ಟು ಸರ್ಕಾರ ನಡೆಸಬಹುದಿತ್ತು. ಈ ರೀತಿ ಆಗಲು ಅಣ್ಣ-ತಮ್ಮಂದಿರೇ ಹೊಣೆ. ಕುಮಾರಸ್ವಾಮಿ ಇಲ್ಲದೇ ರೇವಣ್ಣ ಒಬ್ಬರೇ ಹೊಣೆಯಾಗಲು ಸಾಧ್ಯವಿಲ್ಲ. ಅಂತಿಮವಾಗಿ ಸಹಿ ಹಾಕುವವರು, ನಿರ್ಧಾರ ತೆಗೆದುಕೊಳ್ಳುವವರು ಕುಮಾರಸ್ವಾಮಿ ತಾನೇ. ಕುಮಾರಸ್ವಾಮಿ ಹೆಸರು ಉಳಿಸಿಕೊಳ್ಳಲು ರೇವಣ್ಣ ಹೆಸರು ಡ್ಯಾಮೇಜ್ ಮಾಡುತ್ತಿದ್ದಾರೆ. ಇದಕ್ಕೆಲ್ಲ ನೇರ ಹೊಣೆ ಕುಮಾರಸ್ವಾಮಿ ಹೊರತು ರೇವಣ್ಣ ಅಲ್ಲ ಎಂದರು.
ನಾವು ಏಳು ಜನ ತಪ್ಪು ಮಾಡಿ ಪಕ್ಷ ಬಿಟ್ಟು ಬರಲಿಲ್ಲ. ಇವತ್ತು ನಾರಾಯಣಗೌಡ ಪಕ್ಷ ಬಿಟ್ಟು ಬಂದು ಮಾತನಾಡುತ್ತಿದ್ದಾರೆ, ಅದೇ ಸ್ಥಿತಿ ಸಚಿವ ಪುಟ್ಟರಾಜುಗೂ ಬರಬಹುದು ಎಂದು ಚಲುವರಾಯಸ್ವಾಮಿ ಎಚ್ಚರಿಸಿದರು.