ಮಂಡ್ಯ: ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟದಲ್ಲಿ ಏಳು ಅಡಿ ಏರಿಕೆ ಕಂಡುಬಂದಿದೆ. ಕಳೆದ 15 ದಿನಗಳಲ್ಲಿ ಕೆಆರ್‌ಎಸ್ ಒಳಹರಿವಿನಲ್ಲಿ ಸ್ಥಿರತೆ ಕಾಯ್ದುಕೊಂಡಿರುವುದು ಹಾಗೂ ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಿರುವುದರಿಂದ ಜಲಾಶಯದ ಸಂಗ್ರಹದಲ್ಲಿ ಹೆಚ್ಚಳವಾಗಿದೆ.
ಅಣೆಕಟ್ಟೆಯ ನೀರಿನ ಮಟ್ಟ 124.80 ಅಡಿ ಇದ್ದು, ಇಂದು ಅಣೆಕಟ್ಟೆಯಲ್ಲಿ ನೀರಿನ ಮಟ್ಟ ದಲ್ಲಿ 119.50 ಅಡಿ ದಾಖಲಾಗಿದೆ. ಜಲಾಶಯಕ್ಕೆ 14,061 ಕ್ಯುಸೆಕ್ ನೀರು ಹರಿದು ಬರುತ್ತಿದ್ದರೆ, 4,197 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ನೀರಿನ ಸಂಗ್ರಹ 42.417 ಟಿಎಂಸಿ ಅಡಿಗೆ ಏರಿಕೆಯಾಗಿದೆ.
ಆ.11 ರಂದು ಕೆಆರ್‌ಎಸ್ ಅಣೆಕಟ್ಟೆಯಲ್ಲಿ 121 ಅಡಿ ನೀರು ಸಂಗ್ರಹವಾಗಿತ್ತು. ಅಂದು ಜಲಾಶಯಕ್ಕೆ 8,007 ಕ್ಯುಸೆಕ್ ನೀರು ಹರಿದುಬಂದಿತ್ತು. ಹಾಗೆ 5,523 ಕ್ಯುಸೆಕ್ ನೀರನ್ನು ಹೊರಬಿಡಲಾಗಿತ್ತು. ನೀರಿನ ಸಂಗ್ರಹ ಅಂದು 44.322 ಟಿಎಂಸಿ ಅಡಿ ಇತ್ತು. ನಂತರದ ದಿನಗಳಲ್ಲಿ ಮಳೆಯ ಪ್ರಮಾಣವೂ ಕಡಿಮೆಯಾಯಿತು. ಜಲಾಶಯದಲ್ಲಿ ನೀರಿನ ಮಟ್ಟ ಕುಸಿಯಲಾರಂಭಿಸಿತು. ಆ.30ರಂದು ತಮಿಳುನಾಡಿನಿಂದ ನೀರು ಬಿಡುಗಡೆಗೆ ಒತ್ತಡ ಹೆಚ್ಚಾಗಿದ್ದರಿಂದ ನೀರು ನಿರ್ವಹಣಾ ಮಂಡಳಿ 30 ಟಿಎಂಸಿ ನೀರನ್ನು ಹರಿಸುವಂತೆ ಸೂಚಿಸಿತು. ಈ ಮೂಲಕ ರೈತರ ಆಸೆಗೆ ತಣ್ಣೀರೆರಚಿದಂತಾಗಿತ್ತು.
ತಮಿಳುನಾಡಿಗೆ ನಿರಂತರ ನೀರು:
ಸೆಪ್ಟೆಂಬರ್ 3 ರಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುವ ಪ್ರಕ್ರಿಯೆ ಶುರುವಾಯಿತು. ನಿತ್ಯ 8 ರಿಂದ 10 ಸಾವಿರ ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹರಿಸಲಾಯಿತು. ಇದರೊಂದಿಗೆ ಅಣೆಕಟ್ಟೆಯ ನೀರಿನ ಮಟ್ಟವೂ ದಿನದಿಂದ ದಿನಕ್ಕೆ ಕುಸಿಯಲಾರಂಭಿಸಿತು. ಸೆ.30ರ ವೇಳೆಗೆ ಅಣೆಕಟ್ಟೆಯ ನೀರಿನ ಮಟ್ಟ 112.64 ಅಡಿಗೆ ತಲುಪಿತ್ತು. ಆಗಸ್ಟ್ 11 ರಿಂದ ಸೆ.30ರವರೆಗೆ ಅಣೆಕಟ್ಟೆಯ ನೀರಿನ ಮಟ್ಟದಲ್ಲಿ 8.36 ಅಡಿ ನೀರು ಕಡಿಮೆಯಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ಅಲ್ಪಸ್ವಲ್ಪ ಮಳೆ ಸುರಿಯುತ್ತಿದ್ದರೂ ಸ್ವಲ್ಪ ಪ್ರಮಾಣದ ಒಳಹರಿವು ದಾಖಲಾಗಿತ್ತು. ಅ.6ರಂದು ಜಲಾಶಯದಲ್ಲಿ 114.70 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಅ೦ದು ಅಣೆಕಟ್ಟೆಗೆ 13,795 ಕ್ಯುಸೆಕ್ ಒಳಹರಿವಿತ್ತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅ.7ರಂದು ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಪರ್ಜನ್ಯ ಹೋಮ ನಡೆಸಿ ಮಳೆಗಾಗಿ ಪ್ರಾರ್ಥಿಸಿದ್ದರು. ಇದಾದ ನಂತರದಲ್ಲಿ ಅ.8ರಂದು 11,893 ಕ್ಯುಸೆಕ್, 9ರಂದು 7692 ಕ್ಯುಸೆಕ್, 10 ರಂದು 7428 ಕ್ಯುಸೆಕ್, 11 ರಂದು 10,481 ಕ್ಯುಸೆಕ್, 12 ರಂದು 12,684 ಕ್ಯುಸೆಕ್, 13 ರಂದು 10,306 ಕ್ಯುಸೆಕ್, 14 ರಂದು, 10, 366 ಕ್ಯುಸೆಕ್, 15 ರಂದು 10418 ಕ್ಯುಸೆಕ್ 16ರಂದು 10,428 ಕ್ಯುಸೆಕ್ 17 ರಂದು 12,061 ಕ್ಯುಸೆಕ್, 18 ರಂದು 14,061 ಕ್ಯುಸೆಕ್ ನಂತೆ ಒಳಹರಿವು ಹೆಚ್ಚಾಗುತ್ತಾ ಬಂದಿತ್ತು. ಒಳಹರಿವಿನಲ್ಲಿ ನಿರ್ದಿಷ್ಟತೆ ಕಾಯ್ದುಕೊಂಡಿದ್ದರಿಂದ ಅಣೆಕಟ್ಟೆಯ ನೀರಿನ ಮಟ್ಟದಲ್ಲಿ 4 ಅಡಿಗಳಷ್ಟು ಏರಿಕೆಯಾಗಿದೆ. ಇನ್ನು ಜಲಾಶಯ ಭರ್ತಿಗೆ 5.72 ಅಡಿಯಷ್ಟು ಮಾತ್ರ ಬಾಕಿ ಇದೆ.
ಪರ್ಜನ್ಯ ಹೋಮದ ನಂತರ ಉತ್ತಮ ಮಳೆ:
ರಾಜ್ಯದಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬೀಳದಿರುವುದರಿಂದ ಮಳೆ ಅಭಾವ ಕಾಡಿತ್ತು. ಸಾಮಾನ್ಯವಾಗಿ ಕಳೆದ ಮೂರು ವರ್ಷ ಜುಲೈ- ಆಗಸ್ಟ್ ತಿಂಗಳಲ್ಲೇ ಭರ್ತಿಯಾಗುತ್ತಿದ್ದ ಕಾವೇರಿ ಕಣಿವೆ ಜಲಾಶಯಗಳು ಈ ಬಾರಿ ಭರ್ತಿಯ ಭಾಗ್ಯವನ್ನೇ ಕಾಣಲಿಲ್ಲ. ಇದರಿಂದ ಕಾವೇರಿ, ಕಬಿನಿಗೆ ಬಾಗಿನ ಸಲ್ಲಿಸುವ ಯೋಗವೂ ರಾಜ್ಯದ ದೊರೆಗೆ ಕೂಡಿಬರಲಿಲ್ಲ.
ಇದನ್ನು ಮನಗಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅ.6ರಂದು ಕೆಆರ್ಎಸ್ಗೆ ಆಗಮಿಸಿ ಪರ್ಜನ್ಯ ಹೋಮ ನಡೆಸುವುದರೊಂದಿಗೆ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ್ದರು. ನಂತರದಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯಕ್ಕೆ ನೀರು ಹರಿದುಬಂದಿದೆ.
ಕಾಕತಾಳೀಯವೆಂಬಂತೆ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವುದರ ನಡುವೆಯೂ ಕೆಆರ್‌ಎಸ್ ನೀರಿನ ಮಟ್ಟದಲ್ಲಿ 4 ಅಡಿ ನೀರು ಏರಿಕೆ ಕಂಡುಬಂದಿರುವುದು ಈ ಮಾತನ್ನು ಪುಷ್ಟಿಕರಿಸಿದೆ. ಇನ್ನೊಂದು ಮೂಲದ ಪ್ರಕಾರ ಕೆಆರ್‌ಎಸ್ ಜಲಾಶಯವನ್ನು ಪೂರ್ಣ ಪ್ರಮಾಣದಲ್ಲಿ ತುಂಬಿಸುವ ಸಲುವಾಗಿ ತಮಿಳುನಾಡಿಗೆ ಹರಿಸಲಾಗುತ್ತಿರುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಇದರ ಪರಿಣಾಮ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಒಟ್ಟಿನಲ್ಲಿ ಜಲಾಶಯ ಭರ್ತಿಯಾಗುತ್ತಿರುವುದುಸ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.