ಮಂಡ್ಯ: ಕೆ.ಆರ್.ಎಸ್ ಜಲಾಶಯ ಭದ್ರತೆಯ ದೃಷ್ಟಿಯಿಂದ ಆಣೆಕಟ್ಟಿನ ಮೇಲೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದ್ದರೂ ಕೂಡಾ ಅಧಿಕಾರಿಗಳು ತಮ್ಮ ಲಾಬಿಗಾಗಿ ಬೇಕಾಗಿರುವವರನ್ನು ಒಳಗೆ ಬಿಡುತ್ತಿದ್ದಾರೆ, ಇದರಿಂದ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.
ಸ್ಥಳೀಯ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಜಲಾಶಯದ ಭದ್ರತೆಗೆ ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ಆದರೆ ಈ ಉದ್ದೇಶವೇ ಈಗ ಬುಡಮೇಲಾಗಿದ್ದು, ಸದ್ಯ ಕೆಆರ್ಎಸ್ ಭರ್ತಿಯಾಗಿದ್ದು ಪ್ರವಾಸಿಗರ ದಂಡು ಕೆಆರ್ಎಸ್ನತ್ತ ಧಾವಿಸುತ್ತಿದ್ದಾರೆ. ಆದರೆ ಜಲಾಶಯದ ಮೇಲೆ ಹೋಗಲು ಸಾರ್ವಜನಿಕರಿಗೆ ನಿಷೇಧವಿದ್ದರೂ ಸಹ ಕೆಲವು ಅಧಿಕಾರಿಗಳಿಗೆ ಲಾಬಿ ಮಾಡಿ ಮೇಲೆ ಹೋಗುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.
ಇನ್ನೂ ಮೇಲ್ವರ್ಗದ ಅಧಿಕಾರಿಗಳು ಭದ್ರತೆಯ ನೀತಿಯನ್ನು ಮೀರಿ ಸಂಬಂಧಿಕರನ್ನು, ಸ್ನೇಹಿತರನ್ನು ಆಣೆಕಟ್ಟೆಯ ಮೇಲೆ ಕಳುಹಿಸುತ್ತಿದ್ದಾರೆ, ಇನ್ನು ಭದ್ರತೆಗೆ ಉಪಯೋಗಿಸಬೇಕಿದ್ದ ಪೊಲೀಸ್ ವಾಹನ ಪ್ರವಾಸಿಗರ ವಾಹನವಾಗಿ ಮಾರ್ಪಟ್ಟಿದೆ. ಅಧಿಕಾರಿಗಳು ಸಂಬಂಧಿಕರನ್ನು ಮೇಲೆ ಕರೆದುಕೊಂಡು ಹೋಗಲು ಸರ್ಕಾರಿ ವಾಹನವನ್ನು ಟ್ಯಾಕ್ಸಿ ರೀತಿಯಾಗಿ ಉಪಯೋಗಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.
ಮಾಧ್ಯಮದವರನ್ನು ಕಳ್ಳರಂತೆ ನೋಡುವ ಅಧಿಕಾರಿಗಳು
ಸಂಬಂಧಿಕರಿಗೆ, ಸ್ನೇಹಿತರಿಗೆ ಜಾರಿಯಾಗದ ಕಾನೂನು ಪಾಠವನ್ನು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಲಾಗುತ್ತಿದೆ. ಅಣೆಕಟ್ಟೆ ಪ್ರವೇಶಕ್ಕೆ ಹಿರಿಯ ಅಧಿಕಾರಿಗಳ ಅನುಮತಿ ಪಡೆಯಬೇಕು ಎಂಬ ಒತ್ತಡವನ್ನು ಪಹರೆ ಸಿಬ್ಬಂದಿಯು ಹಾಕುತ್ತಾರೆ. ಮಾಹಿತಿಯನ್ನು ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಾರೆ. ಮಾಧ್ಯಮ ಪ್ರತಿನಿಧಿಗಳು ಎಲ್ಲಿ ತಮ್ಮ ಲೋಪವನ್ನು ತೋರಿಸುತ್ತಾರೋ ಎಂಬ ಅನುಮಾನದ ರೀತಿ ನೋಡುತ್ತಾರೆ. ಒಂದೊಮ್ಮೆ ಒಳಗೆ ಬಿಟ್ಟರೆ ಓರ್ವ ಪೇದೆಯನ್ನು ಜೊತೆಯಲ್ಲಿ ಕಳುಹಿಸಿ ಚಲನವಲನ ವೀಕ್ಷಣೆ ಮಾಡಲಾಗುತ್ತಿದೆ. ಆದರೆ ಸಂಬಂಧಿಕರು, ಸ್ನೇಹಿತರು, ಹಿತೈಷಿಗಳನ್ನು ಸ್ವಚ್ಛಂದವಾಗಿ ಓಡಾಡಲು ಬಿಡಲಾಗುತ್ತಿದೆ. ಅಧಿಕಾರಿಗಳ ಈ ನೀತಿಗೆ ಕೆಲ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.