ಮಂಡ್ಯ: ಬೂಕನಕೆರೆಗೆ ಆಗಮಿಸಿದ್ದ ಕೋಡಿಮಠ ಶ್ರೀಗಳು, ಮಳೆ ಅನಾಹುತ ಇನ್ನೂ ಮುಂದುವರಿಯಲಿದೆ. ದೇಶಾದ್ಯಂತ ಜಲಪ್ರಳಯ ಎದುರಾಗಲಿದೆ. ಸುನಾಮಿ ಬರುವ ಸಾಧ್ಯತೆಯೂ ಇದೆ. ಜನರು ಮನೆಯಿಂದ ಹೊರಡುವಾಗ ಬಡಿಗೆ ಹಿಡಿದು ಹೋಗುವ ಕಾಲ ಬರಲಿದೆ. ಭೂಮಿಯಿಂದ ಹೊಸ ಹೊಸ ವಿಷಜಂತುಗಳು ಉದ್ಭವಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ಬಗ್ಗೆ ಈ ಹಿಂದೆಯೇ ನಾನು ಹೇಳಿದ್ದೆ, ಅಲ್ಲದೇ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುವ ಬಗ್ಗೆಯೂ ಹೇಳಿದ್ದೆ. ಇದೀಗ ನಾನು ಹೇಳಿದ ಎಲ್ಲ ಮಾತುಗಳು, ಭವಿಷ್ಯಗಳು ನಿಜವಾಗಿದೆ. ಇದಕ್ಕಿಂತಲೂ ಹೆಚ್ಚಿನ ಕಷ್ಟ ಕಾಲ ಎದುರಾಗಲಿದೆ. ಇದಕ್ಕೆಲ್ಲ ದೇವರನ್ನು ಪೂಜಿಸುವುದು ಒಂದೇ ಪರಿಹಾರ ಎಂದಿದ್ದಾರೆ. ಇತ್ತೀಚಿಗೆ ಭಗವಂತನ ಪೂಜೆ ಆಡಂಬರವಾಗಿದೆ ಎಂದು ಬೇಸರಿಸಿದ್ದಾರೆ. ಯೋಗ್ಯ ಸಾಧುಗಳಿದ್ದಾರೆ, ಸ್ವಾಮೀಜಿಗಳ ಗದ್ದುಗೆಗಳಿವೆ. ಎಲ್ಲರೂ ಸೇರಿ ಪ್ರಾರ್ಥಿಸಿದರೆ ಜಗತ್ತು ಉಳಿಯುತ್ತದೆ ಎಂದು ಶ್ರೀಗಳು ಸಲಹೆ ನೀಡಿದ್ದಾರೆ.
ನೀಚಂಗೆ ದೊರೆತನ, ಹೇಡಿಂಗೆ ಹಿರಿತನ: ಮುರುಘಾ ಮಠದ ಶಿವಮೂರ್ತಿ ಸ್ವಾಮಿ ವಿರುದ್ಧ ಕೇಳಿ ಬಂದಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಡಿಮಠದ ಶ್ರೀಗಳು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ನೀಚಂಗೆ ದೊರೆತನವು, ಹೇಡಿಂಗೆ ಹಿರಿತನವೂ, ಮೂಡಂಗೆ ಗುರುತನವೂ ಸಿಕ್ಕಿರುವುದರಿಂದ ಈ ಪರಿಸ್ಥಿತಿ ಉದ್ಭವಿಸಿದೆ. ಇಂತಹ ಆರೋಪಗಳು ಮುಂದೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಶ್ರೀಗಳು ಎಚ್ಚರಿಸಿದ್ದಾರೆ.
ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಲು ಕೋಡಿಮಠ ಶ್ರೀಗಳು ನಿರಾಕರಿಸಿದ್ದಾರೆ. ಶುಭಕೃತ್ ಸಂವತ್ಸರದಲ್ಲಿ ಎಲ್ಲ ಅಶುಭ ಎಂದಿದ್ದ ಸ್ವಾಮೀಜಿ ಗಾಳಿ ಮಳೆ ಹೆಚ್ಚಾಗಲಿದೆ, ವಿಪರೀತ ಮಿಂಚು ಬರಲಿದೆ, ಸಾವು - ನೋವು ಹೆಚ್ಚಾಗಲಿದೆ, ಜಲಾಶಯಗಳು ತುಂಬಿ ಹರಿಯುತ್ತವೆ. ಮಲೆನಾಡು ಬಯಲು ಸೀಮೆಯಾದೀತು. ಮಲೆನಾಡಿನವರಿಗೆ ಮಳೆ ಕಮ್ಮಿಯಾದರೆ ಸಾಕು ಎನ್ನುವ ಮನೋಭಾವನೆಯಿದೆ. ಪ್ರಕೃತಿ ಅಲ್ಲೋಲ ಕಲ್ಲೋಲವಾಗಲಿದೆ ಎಂದು ಈ ಹಿಂದೆ ಕೋಡಿಮಠ ಶ್ರೀಗಳು ಭವಿಷ್ಯ ನುಡಿದಿದ್ದರು.
ಇದನ್ನೂ ಓದಿ: ಕಾರ್ತಿಕ ಮಾಸದಲ್ಲಿ ಭೂಮಿ ನಡುಗೀತು, ಮೇಘ ಅಬ್ಬರಿಸೀತು: ಕೋಡಿಮಠ ಶ್ರೀ