ಮಂಡ್ಯ: ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರು – ಮೈಸೂರು ಹೆದ್ದಾರಿ ಬಂದ್ ಮಾಡಿ ಆ. 21ರಂದು ಪ್ರತಿಭಟಿಸಲು ಬಿಜೆಪಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮಂಡ್ಯದ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಐದು ಜಿಲ್ಲೆಗಳ ಬಿಜೆಪಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಮುಖಂಡರ ಭಾಗಿಯಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣ ಗೌಡ, ಕಾವೇರಿ ಕೊಳ್ಳದ ಜಲಾಶಯಗಳಿಂದ ನೀರು ಬಿಡುಗಡೆ ಮಾಡುವಂತೆ ಆದೇಶ ಇಲ್ಲದಿದ್ದರೂ ರಾಜ್ಯ ಸರ್ಕಾರ ನೀರು ಬಿಡುಗಡೆ ಮಾಡುವ ಮೂಲಕ ರೈತರಿಗೆ ದ್ರೋಹ ಮಾಡಿದೆ. ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ, ಜಲಾಶಯಗಳಲ್ಲಿ ನೀರು ಸಹ ಕಡಿಮೆ ಇದೆ, ಆದರೂ ಸಹ ಏಕಾಏಕಿ ತೀರ್ಮಾನ ಕೈಗೊಂಡು ನೀರು ಬಿಡುಗಡೆ ಮಾಡಲಾಗಿದೆ.
ತಮಿಳುನಾಡಿನ ಜಲಾಶಯಗಳಲ್ಲಿ ಸಾಕಷ್ಟು ಪ್ರಮಾಣದ ನೀರು ಲಭ್ಯವಿದೆ, ಅಷ್ಟೇ ಅಲ್ಲದೆ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ನ ಅಂತಿಮ ತೀರ್ಪಿನಲ್ಲಿ ಕುರುವೈ ಬೆಳೆ ಪ್ರದೇಶ 1.80 ಹೇಕ್ಟರ್ ಮೀರಿರಬಾರದು ಎಂದು ಹೇಳಿದೆ. ಆದರೆ ತಮಿಳುನಾಡಿನಲ್ಲಿ ಮೂರು ಲಕ್ಷ ಹೇಕ್ಟರ್ ಪ್ರದೇಶದಲ್ಲಿ ಕುರುವೈ ಬೆಳೆ ಬೆಳೆಯಲಾಗಿದ್ದು, ಅಲ್ಲಿನ ರೈತರ ಹಿತರಕ್ಷಣೆಗಾಗಿ ರಾಜ್ಯ ಸರ್ಕಾರ ನೀರು ಬಿಡುಗಡೆ ಮಾಡಿದೆ ಎಂದು ದೂರಿದರು.
ಬೆಂಗಳೂರಲ್ಲಿ ನಡೆದ ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟ ಸಭೆಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಭಾಗವಹಿಸಿದ್ದರು. ಅವರ ಓಲೈಕೆಸಲು ಮತ್ತು ಡಿ ಕೆ ಶಿವಕುಮಾರ್ ಹಾಗೂ ಸ್ಟಾಲಿನ್ ನಡುವೆ ಆಗಿರುವ ಒಳ ಒಪ್ಪಂದದಂತೆ ನೀರು ಬಿಡಲಾಗಿದೆ ಎಂದು ಆರೋಪಿಸಿದರು.
ಸೋಮವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಇಂಡವಾಳು ಮತ್ತು ಯಲಿಯೂರು ವೃತ್ತದಲ್ಲಿ ಬಂದ್ ಮಾಡಿ ಪ್ರತಿಭಟಿಸಲಾಗುವುದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಪ್ರತಿಭಟನೆಯ ನೇತೃತ್ವ ವಹಿಸಲು ಆಹ್ವಾನಿಸಲಾಗುವುದು. ಜೊತೆಗೆ ಜಿಲ್ಲೆಯ ಜನಪರ, ರೈತ, ಕನ್ನಡಪರ ಮತ್ತು ಆಟೋ ಟ್ಯಾಕ್ಸಿ ಮಾಲೀಕರನ್ನು ಸಹ ಭಾಗವಹಿಸುವಂತೆ ಕೋರಲಾಗುವುದು ಎಂದರು.
ನಂತರ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಇದೊಂದು ರಾಜಕೀಯ ಹೋರಾಟ ಅಲ್ಲ, ನಾವೆಲ್ಲರೂ ರೈತರ ಪರ ನಿಲ್ಲಬೇಕು, ರೈತಪರ ನಿಲುವಿಗೆ ಬದ್ಧರಾಗಬೇಕು. ಹಾಗಾಗಿ ಎಲ್ಲರನ್ನೂ ಒಳಗೊಂಡು ಹೋರಾಟ ರೂಪಿಸಲಾಗಿದೆ. ಸಂಕಷ್ಟ ಕಾಲದಲ್ಲಿ ರೈತರ ಪರ ಸರ್ಕಾರ ನಿಲ್ಲುತ್ತಿಲ್ಲ, ರೈತರಿಗೆ ಅನ್ಯಾಯವಾಗುತ್ತಿದೆ. ಕಾವೇರಿ ಕಣಿವೆ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ಎದುರಿಸಬೇಕಾಗಿದೆ. ಇದನ್ನು ಪ್ರತಿಯೊಬ್ಬರು ಅರಿತು ಮುನ್ನಡೆಯ ಬೇಕಾಗಿದೆ. ಕೇಂದ್ರ ಸರ್ಕಾರದ ಕಡೆ ರಾಜ್ಯ ಸರ್ಕಾರ ಕೈ ತೋರಿಸಬಹುದು. ಆದರೆ ಅಂಬರೀಶ್ ಕೇಂದ್ರ ಸಚಿವರಾಗಿದ್ದಾಗ ರಾಜೀನಾಮೆ ನೀಡಿದ ನಿದರ್ಶನ ನಿಮ್ಮ ಮುಂದಿದೆ, ಕೇಂದ್ರ ಸರ್ಕಾರ ಇತ್ಯರ್ಥ ಮಾಡುವುದಾಗಿದ್ದರೆ ಅವರೇಕೆ ರಾಜೀನಾಮೆ ನೀಡುತ್ತಿದ್ದರು ಎಂಬುದನ್ನ ತಿಳಿಯಬೇಕು. ಇಂತಹ ವಿಷಯದಲ್ಲಿ ಸುಮ್ಮನೆ ರಾಜಕಾರಣ ಮಾಡಬಾರದು ಎಂದು ಹೇಳಿದರು.
ಕಾವೇರಿ ನದಿ ನೀರು ವಿಚಾರದಲ್ಲಿ ತಮಿಳುನಾಡು ಸದಾ ಜಾಗೃತ ವಹಿಸಲಿದೆ. ಹಲವು ನಿರ್ಧಾರಗಳು ಅವರ ಪರವಾಗಿ ಹೊರಬಂದಿದೆ. ರಾಜ್ಯ ಸರ್ಕಾರ ಸಹ ಮುನ್ನೆಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ರೈತರ ವಿರುದ್ಧ ನಿಲುವು ತಾಳಬಾರದು. ನಾನು ಪಕ್ಷೇತರ ಸಂಸದೆ, ರೈತರ ಪರ ಹೋರಾಟಕ್ಕೆ ಸದಾ ನಿಲ್ಲಲಿದ್ದೇನೆ, ಈ ವಿಚಾರವಾಗಿ ರಾಜಕಾರಣ ಮಾಡುವ ಪ್ರಶ್ನೆಯೇ ಇಲ್ಲ, ಕಾವೇರಿ ನದಿ ನೀರಿನ ವಿಚಾರದಲ್ಲಿ ಯಾರು ಸಹ ರಾಜಕಾರಣ ಮಾಡಬಾರದು ಎಂದು ತಿಳಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮುದ್ರದ ಮೇಲೆ ಕಲ್ಲೆಸೆಯುವ ಕೆಲಸ ಮಾಡ್ತಿದಾರೆ : ಸಂಸದ ಡಿವಿ ಸದಾನಂದಗೌಡ