ಮಂಡ್ಯ: ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಹಾಗೂ ಜಿಲ್ಲಾ ವ್ಯಾಪ್ತಿಯ ಎಲ್ಲಾ ರೀತಿಯ ವಾಣಿಜ್ಯ ಸಂಕೀರ್ಣಗಳು, ಅಂಗಡಿ ಮುಂಗಟ್ಟುಗಳ ಮತ್ತು ಕಾರ್ಯ ಸಂಸ್ಥೆಗಳ ಕಚೇರಿಗಳಲ್ಲಿ ನಾಮಫಲಕವನ್ನು ಕನ್ನಡ ಭಾಷೆಯಲ್ಲಿ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು, ಸರ್ಕಾರದ ಎಲ್ಲಾ ಕಚೇರಿಗಳ ಪತ್ರ ವ್ಯವಹಾರಗಳು ಕಡ್ಡಾಯವಾಗಿ ಕನ್ನಡದಲ್ಲೇ ಇರತಕ್ಕದ್ದು. ಕರ್ನಾಟಕದಲ್ಲಿ ಕನ್ನಡವು ಆಡಳಿತ ಭಾಷೆಯ ಜೊತೆಗೆ ಸಾರ್ವಭೌಮ ಭಾಷೆಯಾಗಿದ್ದು, ರಾಜ್ಯದಲ್ಲಿ ಜರುಗುವ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಆಯೋಜನೆಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂದು ಸೂಚಿಸಿದ್ದಾರೆ.
ಕನ್ನಡ ಪರ ಸಂಘಟನೆಗಳು, ಕನ್ನಡಾಭಿಮಾನಿಗಳು, ಕನ್ನಡ ಸಾಹಿತಿಗಳು, ಹೋರಾಟಗಾರರು ಪದೇ ಪದೇ ಮನವಿ ಸಲ್ಲಿಸಿ ಮಂಡ್ಯ ನಗರ ಹಾಗೂ ಇತರೆ ತಾಲೂಕು ಕೇಂದ್ರಗಳು, ಪಟ್ಟಣಗಳಲ್ಲಿ ವಾಣಿಜ್ಯ ಸಂಕೀರ್ಣಗಳು, ಅಂಗಡಿ ಮುಂಗಟ್ಟುಗಳು ಮತ್ತು ಕಾರ್ಯ ಸಂಸ್ಥೆಗಳ ಕಚೇರಿಗಳಲ್ಲಿ ಸಾಮಾನ್ಯವಾಗಿ ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸುತ್ತಿಲ್ಲ ಎಂದು ದೂರುಗಳು/ಆಕ್ಷೇಪಣೆಗಳನ್ನು ವ್ಯಕ್ತಪಡಿಸಿರುತ್ತಾರೆ. ಕರ್ನಾಟಕ ರಾಜ್ಯವು ರಚನೆಯಾಗಿ 68 ವರ್ಷಗಳಾಗಿದ್ದು, ಕನ್ನಡವನ್ನು ಸಂಪರ್ಕ ಭಾಷೆಯಾಗಿ ಅಧಿಕೃತವಾಗಿ ಮತ್ತು ಸಾರ್ವಜನಿಕವಾಗಿ ಬಳಕೆ ಮಾಡುವುದು ಅಗತ್ಯವಿರುತ್ತದೆ, ಕನ್ನಡ ಭಾಷೆ ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಯಾಗಿದ್ದು, ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಭಾಷೆಯಾಗಿದೆ. ಕೇಂದ್ರ ಸರ್ಕಾರವು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಘೋಷಣೆ ಮಾಡಿದ್ದು, ಕನ್ನಡ ಭಾಷೆಯು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸ್ಥಾನಮಾನ ಗಳಿಸಿದೆ. ಕರ್ನಾಟಕ ಸುವರ್ಣ ಸಂಭ್ರಮ - 50 ರ ಆಚರಣೆಯಲ್ಲಿ ಜಿಲ್ಲೆಯಲ್ಲಿ ಪ್ರತಿಯೊಂದು ಕಾರ್ಯ ಸಂಸ್ಥೆಗಳು ತಮ್ಮ ನಾಮಫಲಕಗಳನ್ನು ಕನ್ನಡ ಭಾಷೆಯಲ್ಲೇ ಅಳವಡಿಸತಕ್ಕದ್ದು ಎಂದು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶವಿಲ್ಲದಂತೆ ನಾಮಫಲಕಗಳನ್ನು ಬರೆಯಿಸುವುದು. ಪ್ರತಿಯೊಂದು ಕಾರ್ಯ ಸಂಸ್ಥೆಯ ನಾಮಫಲಕವು ಕನ್ನಡದಲ್ಲಿರಬೇಕು ಮತ್ತು ಇತರೆ ಭಾಷೆಗಳನ್ನು ಬಳಸಿರುವ ಸಂದರ್ಭಗಳಲ್ಲಿ, ಆ ಭಾಷೆಯಲ್ಲಿರುವ ಹೆಸರು ಮತ್ತು ಪದಗಳು ಕನ್ನಡ ಆವೃತ್ತಿಯ ಕೆಳಗೆ ಬರತಕ್ಕದ್ದು, ಕನ್ನಡ ನಾಮಫಲಕವನ್ನು ಹೆಚ್ಚು ಎದ್ದು ಕಾಣುವಂತೆ ಬರೆದಿರತಕ್ಕದ್ದು ಹಾಗೂ ಇತರೆ ಭಾಷೆಗಳಿಂತಲೂ ಹೆಚ್ಚು ಸ್ಥಳಾವಕಾಶವನ್ನು ಕನ್ನಡ ಭಾಷೆಗೆ ಕಲ್ಪಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಪರವಾನಗಿ ನವೀಕರಣ ಸಮಯದಲ್ಲಿ ಪ್ರಧಾನವಾಗಿ ಕನ್ನಡ ಭಾಷೆಯಲ್ಲಿ ನಾಮಫಲಕ ಇರುವ ಬಗ್ಗೆ ಸ್ಥಳೀಯ ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು. ಕನ್ನಡ ಭಾಷೆಯಲ್ಲಿ ನಾಮಫಲಕವನ್ನು ಅಳವಡಿಸದವರ ಪರವಾನಗಿ ರದ್ದು ಪಡಿಸಲು ಕ್ರಮತೆಗೆದುಕೊಳ್ಳುವುದು ಮತ್ತು ದಂಡ ವಿಧಿಸಲಾಗುವುದು. ಕರ್ನಾಟಕದಲ್ಲಿ ಎಲ್ಲಾ ಆಡಳಿತಾತ್ಮಕ ವ್ಯವಹಾರಗಳಲ್ಲಿ ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ ಎಂದು ತಿಳಿಸಿದ್ದಾರೆ.
ನಗರಸಭೆ ಪೌರಾಯುಕ್ತರು, ಜಿಲ್ಲೆಯಲ್ಲಿನ ಎಲ್ಲಾ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳು, ತಾಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಪುರಸಭೆ/ಪಟ್ಟಣ ಪಂಚಾಯಿತಿಯ ಎಲ್ಲಾ ಮುಖ್ಯಾಧಿಕಾರಿಗಳು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಸೂಕ್ತ ಕ್ರಮ ವಹಿಸತಕ್ಕದ್ದು, ಅದೇ ರೀತಿ ಕನ್ನಡ ಭಾಷೆಯಲ್ಲಿ ನಾಮಫಲಕಗಳನ್ನು ಬಳಸದೇ ಇರುವವರ ಮೇಲೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.
ಇದನ್ನೂ ಓದಿ: ಕರುನಾಡ ಬಾವುಟ ಹಿಡಿದು ಕನ್ನಡ ಹಾಡು ಹಾಡಿ ಟಿಬೆಟಿಯನ್ನರ ರಾಜ್ಯೋತ್ಸವ ಸಂಭ್ರಮ - ವಿಡಿಯೋ