ಮಂಡ್ಯ: ಜಿಲ್ಲೆಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆ ಅದ್ದೂರಿಯಾಗಿ ನಡೆಯುತ್ತಿದೆ. ಈ ಯಾತ್ರೆಗೆ ಜಿಲ್ಲೆಯ ಜನರು ಮತ್ತು ಪಕ್ಷದ ಕಾರ್ಯಕರ್ತರು ಅಭೂತ ಪೂರ್ವವಾಗಿ ತಮ್ಮ ನೆಚ್ಚಿನ ನಾಯಕನನ್ನು ಸ್ವಾಗತಿಸುತ್ತಿದ್ದಾರೆ.
ಅದರಲ್ಲೂ ಸಕ್ಕರೆ ನಾಡಿನ ಸೊಗಡನ್ನು ಪರಿಚಯಿಸುವ ನಿಟ್ಟಿನಲ್ಲಿ ಕಬ್ಬು, ಬೆಲ್ಲ, ಕೊಬ್ಬರಿ, ಭತ್ತದ ತೆನೆ, ಗುಲಾಬಿ, ಸೇವಂತಿ ಹೂ ಸೇರಿದಂತೆ ಹಲವು ಬಗೆ ಬಗೆಯ ಬೃಹತ್ ಹಾರಗಳನ್ನು ತಯಾರಿಸಿ ತಮ್ಮ ನೆಚ್ಚಿನ ನಾಯಕನಿಗೆ ಅರ್ಪಿಸಿ ಅಭಿಮಾನ ಮೆರೆದಿದ್ದಾರೆ. ಅಲ್ಲದೇ ಜೆಡಿಎಸ್ ಶಾಸಕರಂತೂ ಎಚ್ಡಿಕೆ ಮೇಲೆ ಹೆಲಿಕಾಪ್ಟರ್ ಮೂಲಕ ಹೂವಿನ ಮಳೆಯನ್ನೇ ಸುರಿಸಿದ್ದಾರೆ.
ಜೆಡಿಎಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಪಕ್ಷದ ನಾಯಕರು ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಅವುಗಳಲ್ಲಿ ಪ್ರಮುಖವಾದದ್ದು ಪಂಚರತ್ನ ರಥಯಾತ್ರೆ. ಹಲವು ಜಿಲ್ಲೆಗಳಲ್ಲಿ ಸಾಗಿದ್ದ ರಥಯಾತ್ರೆ ಡಿಸೆಂಬರ್ 20 ರಂದು ಮಳವಳ್ಳಿ ವಿಧಾನಸಭಾ ಕ್ಷೇತ್ರದ ಮೂಲಕ ಮಂಡ್ಯ ಜಿಲ್ಲೆಯನ್ನು ಪ್ರವೇಶಿಸಿತು. ಈ ವೇಳೆ, ಜೆಡಿಎಸ್ ಕಾರ್ಯಕರ್ತರು ಮತ್ತು ಜನರು ತಮ್ಮ ನೆಚ್ಚಿನ ನಾಯಕ ಹೆಚ್ಡಿಕೆ ಅವರನ್ನು ಬಗೆ ಬಗೆಯ ಬೃಹತ್ ಹಾರಗಳನ್ನು ಹಾಕಿ ಮತ್ತು ಪುಷ್ಪವೃಷ್ಟಿ ಮಾಡಿ ಬರಮಾಡಿಕೊಂಡರು.
ಎಚ್ಡಿಕೆಗೆ ಬೃಹತ್ ಹಾರ ಹಾಕಿ ಕಾರ್ಯಕರ್ತರ ಸಂಭ್ರಮ: ರಥಯಾತ್ರೆಯ ಮೊದಲ ದಿನವೇ ಮಂಡ್ಯದ ಸೊಗಡನ್ನು ಪರಿಚಯಿಸಲು ಬೆಲ್ಲದಿಂದ ಮಾಡಿದ ಬೃಹತ್ ಹಾರವನ್ನು ಕ್ರೇನ್ ಮೂಲಕ ಹಾಕಿ, ಹೂವಿನ ಮಳೆಯನ್ನು ಸುರಿಸಿ ತಮ್ಮ ನೆಚ್ಚಿನ ನಾಯಕನನ್ನು ಸ್ವಾಗತಿಸಿದರು. ಯಾತ್ರೆ ಉದ್ದಕ್ಕೂ ಕುಮಾರಸ್ವಾಮಿಗೆ ಅಭಿಮಾನಿಗಳು ತಯಾರಿಸಿದ್ದ ಮುಸುಕಿನ ಜೋಳದ ಹಾರ, ಸೇಬಿನ ಹಾರ, ಅನಾನಸ್ ಹಾರ, ಮೂಸಂಬಿ ಹಾರ, ಕಬ್ಬಿನ ಜಲ್ಲೆ ಹಾರ ಹೀಗೆ ವಿವಿಧ ಬಗೆಯ ಹಾರಗಳು ಸೇರಿದಂತೆ ಬೃಹತ್ ಪುಷ್ಪ ಮಾಲೆಗಳನ್ನು ಹಾಕಿ ವಿಶೇಷವಾಗಿ ಸ್ವಾಗತಿಸುವುದರ ಮೂಲಕ ಅಭಿಮಾನಿಗಳು ಸಂಭ್ರಮಿಸಿದರು.
ಇದನ್ನೂ ಓದಿ: ಮಣ್ಣಿನ ಮಕ್ಕಳ ಸರ್ಕಾರ ತರಲು ಜನರು ನಿರ್ಧರಿಸಿಯಾಗಿದೆ: ಪಂಚರತ್ನ ಯಾತ್ರೆಯಲ್ಲಿ ಹೆಚ್ಡಿಕೆ ವಿಶ್ವಾಸ
ಇನ್ನು ಮದ್ದೂರು ತಾಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಹೆಚ್ಡಿಕೆ ಅಭಿಮಾನಿಗಳು ಗೆಡ್ಡೆಕೋಸು, ದಪ್ಪಮೆಣಸಿನಕಾಯಿ, ಬದನೆಕಾಯಿ, ಕ್ಯಾರೆಟ್ ಸೇರಿದಂತೆ ಹಲವು ಬಗೆಯ ತರಕಾರಿಗಳನ್ನು ಬಳಸಿ ಬೃಹತ್ ಹಾರವನ್ನು ತಯಾರಿಸಿ ಕುಮಾರಸ್ವಾಮಿಗೆ ಹಾಕಿದರು. ತಾಲೂಕಿನ ಗೆಜ್ಜ ಲಗೆರೆ ಬಳಿ ತುಳಸಿ ಹಾಗೂ ಸುಗಂಧರಾಜ ಹೂವಿನ ಹಾರವನ್ನು ಹಾಕಿದರೆ, ಬೂದನೂರು ಬಳಿ ಮೂಸಂಬಿ ಹಾರ, ಫ್ಯಾಕ್ಟರಿ ಸರ್ಕಲ್ನಲ್ಲಿ ಕೊಬ್ಬರಿ ಮತ್ತು ಬೆಲ್ಲದ ಹಾರ ಹಾಕಿ, ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿಗೆ ಜೈಕಾರ ಕೂಗಿ ಸಂಭ್ರಮಿಸಿದರು.
ಅಲ್ಲಿಂದ ಮುಂದೆ ಸಾಗಿದ ರಥಯಾತ್ರೆಗೆ ಕೊಮ್ಮೇರಹಳ್ಳಿ, ಹುಲಿವಾನ, ಕೆರಗೋಡು, ಬಿಳಿದೇಗಲು, ದೊಡ್ಡ ಗರುಡನಹಳ್ಳಿ, ಬಸರಾಳು ಸೇರಿದಂತೆ ಹದಿಮೂರು ಕಡೆಗಳಲ್ಲಿ ಬಾದಾಮಿ, ಗೋಡಂಬಿ ಮತ್ತು ದ್ರಾಕ್ಷಿ ಸೇರಿದಂತೆ ಹಾರಗಳನ್ನು ಹಾಕಿ ಸ್ವಾಗತಿಸಿದರು.
ಶಾಸಕರಿಂದ ಹೆಚ್ಡಿಕೆಗೆ ಪುಷ್ಪವೃಷ್ಟಿ: ಜಿಲ್ಲೆಯ ಎಲ್ಲ ಕಡೆಗಳಲ್ಲೂ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಶಾಸಕರು ವಿಶೇಷವಾಗಿ ಸ್ವಾಗತಿಸಿದರು. ಹೆಲಿಕಾಪ್ಟರ್ ಮೂಲಕ ಎಚ್ಡಿಕೆ ಮೇಲೆ ಹೂವಿನ ಮಳೆಯನ್ನೇ ಸುರಿಸಿದರು. ಕೇವಲ ಬೃಹತ್ ಹಾರ ಮಾತ್ರವಲ್ಲದೇ ಪುಷ್ಪವೃಷ್ಟಿ ಮಾಡಿ ಬರಮಾಡಿಕೊಂಡಿರುವುದು ವಿಶೇಷ.
ಜನತೆಯ ಅಭಿಮಾನಕ್ಕೆ ಮನಸೋತ ಕುಮಾರಸ್ವಾಮಿ: ಇಂದು ಪಂಚರತ್ನ ಯಾತ್ರೆ ಮಂಡ್ಯದಲ್ಲಿ ಕೊನೆಗೊಳ್ಳಲಿದೆ. ಏಳು ದಿನಗಳ ಕಾಲ ಯಶಸ್ವಿಯಾಗಿ ಜಿಲ್ಲೆಯಲ್ಲಿ ಯಾತ್ರೆಯು ಮುನ್ನಡೆದಿದೆ. ಅಲ್ಲದೇ ಜನರಿಂದ ಅಭೂತಪೂರ್ವ ಪ್ರೀತಿ ಹೆಚ್ಡಿಕೆಗೆ ಸಿಕ್ಕಿದೆ. ವಿವಿಧ ಬಗೆಯ ಹಾರಗಳಿಂದ ಸ್ವಾಗತಿಸಿದ್ದು, ಕುಮಾರಸ್ವಾಮಿ ಅವರಿಗೆ ಸಖತ್ ಖುಷಿ ತಂದುಕೊಟ್ಟಿದೆ. ಜಿಲ್ಲೆಯ ಜನರ ಅಭಿಮಾನಕ್ಕೆ ಹೆಚ್ಡಿಕೆ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಪಂಚರತ್ನ ರಥಯಾತ್ರೆ