ಮಂಡ್ಯ: ಬಿಜೆಪಿಯ ಜೊತೆಗಿನ ಮೈತ್ರಿಯ ಬಗ್ಗೆ ಸಂಪೂರ್ಣ ಬೆಂಬಲ ನೀಡುವುದರ ಚರ್ಚೆಯ ಜೊತೆಗೆ ತಮಿಳುನಾಡಿಗೆ ಕಾವೇರಿ ನೀರು ಹರಿಸಿದರೆ ಹೋರಾಟ ಸಂಘಟಿಸಲು ಜೆಡಿಎಸ್ ತೀರ್ಮಾನಿಸಿದೆ. ಅಲ್ಲದೆ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಪದಾಧಿಕಾರಿಗಳ ವಿರುದ್ಧ ಕ್ರಮ ಹಾಗೂ ಬದಲಿ ನೇಮಕ ವಿಚಾರವಾಗಿ ಚರ್ಚೆ ಜೆಡಿಎಸ್ ಮಾಜಿ ಶಾಸಕರು ಇಂದು ನಡೆದ ಸಭೆಯಲ್ಲಿ ಮುಖಂಡರು ನಿರ್ಣಯ ಕೈಗೊಂಡಿದ್ದಾರೆ. ಅದರಲ್ಲೂ ಮೈತ್ರಿಯ ವಿಚಾರವಾಗಿ ವರಿಷ್ಠರ ತೀರ್ಮಾನಕ್ಕೆ ಅಂತಿಮವಾಗಿ ಬದ್ಧವಾಗಿರಲು ತೀರ್ಮಾನಿಸಿದ್ದಾರೆ.
ಸಭೆ ಬಳಿಕ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಸಚಿವ ಸಿ ಎಸ್ ಪುಟ್ಟರಾಜು, ಮೈತ್ರಿ ವಿಚಾರದಲ್ಲಿ ನಮ್ಮ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಪಕ್ಷದ ವರಿಷ್ಠರಾದ ಹೆಚ್ ಡಿ ದೇವೇಗೌಡರು ದೇವೇಗೌಡರು ರಾಷ್ಟ್ರಮಟ್ಟದಲ್ಲಿ ತೀರ್ಮಾನ ಮಾಡಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ ಉಳಿಸಿಕೊಳ್ಳುವ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ. ಮೊದಲ ಹಂತದ ಹೆಜ್ಜೆ ಇಡಲಾಗಿದೆ. ಯಾರಿಗೆ ಎಷ್ಟೆಷ್ಟು ಎಂಬ ತೀರ್ಮಾನವನ್ನು ಮುಂದೆ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ದೇವೇಗೌಡರು ದೆಹಲಿಗೆ ಭೇಟಿ ಕೊಟ್ಟಾಗ ಕಾವೇರಿ ವಿಚಾರ ಪ್ರಸ್ತಾಪಿಸಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರ ಹೇಳಿಕೆಗೆ ಉತ್ತರಿಸಿದ ಮಾಜಿ ಸಚಿವ ಪುಟ್ಟರಾಜು ಅವರು, ಚಲುವರಾಯಸ್ವಾಮಿ ದೇವೇಗೌಡರ ಮುಂದೆ ಗೌಣ. ಕಾವೇರಿ ವಿಚಾರದಲ್ಲಿ ದೇವೇಗೌಡರ ದೊಡ್ಡ ಹೋರಾಟ ಇದೆ. ಅವರ ಹೋರಾಟದ ಇತಿಹಾಸ ನೆನಪು ಮಾಡಿಕೊಳ್ಳಲಿ. 1989- 90 ರಲ್ಲಿ ಹೋರಾಟ ಪ್ರಾರಂಭ ಮಾಡಿದಾಗ ದೇವೇಗೌಡರು ಎಷ್ಟು ಲಾರಿಯಲ್ಲಿ ರೈತರನ್ನು ಕೆರೆದುಕೊಂಡು ಹೋಗಿ ಹೋರಾಟಕ್ಕೆ ಬೆಂಬಲಿಸಿದ್ದಾರೆ ಎಂಬುದನ್ನು ಮರೆಯಬಾರದು ಎಂದರು.
ಜೆಡಿಎಸ್ ಉಸಿರಾಡಲು ಮೈತ್ರಿ ಅನಿವಾರ್ಯ ಎಂಬ ಚಲುವರಾಯಸ್ವಾಮಿ ಹೇಳಿಕೆಗೆ, 2018ರಲ್ಲಿ 50ಸಾವಿರ ಅಂತರದಿಂದ ಸೋಲಿಸಿ ಚಲುವರಾಯಸ್ವಾಮಿಯನ್ನು ಡೆಡ್ ಹಾರ್ಸ್ ಮಾಡಿದ್ದರು. ಈಗ ನಮ್ಮನ್ನ ಜನ ಡೆಡ್ ಹಾರ್ಸ್ ಮಾಡಿದ್ದಾರೆ. ಜಿಲ್ಲೆಯ ಜನ ಬುದ್ಧಿವಂತರಿದ್ದಾರೆ. ಅವರ ತಿರ್ಮಾನವನ್ನು ನಾವು ಒಪ್ಪಿಕೊಳ್ಳುತ್ತೇವೆ. 2024ರಲ್ಲಿ ಜನರೇ ಈ ಬಗ್ಗೆ ತೀರ್ಮಾನ ನೀಡುತ್ತಾರೆ ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ, ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಕ್ಕೆ ಅನಿವಾರ್ಯವಾಗಿದೆ. ಇವತ್ತಿನ ಅನಿವಾರ್ಯ ಪರಿಸ್ಥಿತಿಗೆ ಕಾಂಗ್ರೆಸ್‌ನಷ್ಟೇ ಚಲುವರಾಯಸ್ವಾಮಿ ಕಾರಣ. ನಮ್ಮ ಸರ್ಕಾರ ತೆಗೆಯಲು ಚಲುವರಾಯಸ್ವಾಮಿ ರಾಜಕೀಯ ವ್ಯಭಿಚಾರ ಮಾಡಿದ್ದರು. ಯುಪಿಎ ಸ್ಥಾಪನೆಗೆ ದೇವೇಗೌಡರ ಶ್ರಮವಿತ್ತು. ಆದರೆ ಇಂದು ದೇವೇಗೌಡರನ್ನು ಬದಿಗೊತ್ತಿ ಐಎನ್ಡಿಐಎ ಒಕ್ಕೂಟ ಮಾಡಿದ್ದಾರೆ. ಹಾಗಾಗಿ ಅನಿವಾರ್ಯವಾಗಿ ಬಿಜೆಪಿ ಜೊತೆ ಹೋಗುವ ಪರಿಸ್ಥಿತಿ ಇದೆ. 135 ಸ್ಥಾನ ಗೆದ್ದರು ಅಭ್ಯರ್ಥಿಗಳಿಗಾಗಿ ಕಾಂಗ್ರೆಸ್ ಬೇರೆ ಪಕ್ಷದ ಕದ ತಟ್ಟುತ್ತಿದೆ. ಚಲುವರಾಯಸ್ವಾಮಿಗೆ ಜನ ಆಶೀರ್ವಾದ ಮಾಡಿದ್ದಾರೆ. ಅವರು ಚೆನ್ನಾಗಿ ಮೇಯಲಿ ಎಂದು ಟೀಕಿಸಿದ್ದಾರೆ.
ಒಗ್ಗಟ್ಟಿನ ಹೋರಾಟ: ಕಳೆದ ಬಾರಿ ಮೈತ್ರಿಯಲ್ಲಿ ಕಾಂಗ್ರೆಸ್ ರಾಜಧರ್ಮ ಪಾಲಿಸಲಿಲ್ಲ. ಈಗ ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಮಾತನಾಡಲು ಅವರಿಗೆ ಅರ್ಹತೆ ಇಲ್ಲ. ಸಹೋದರರ ಮಧ್ಯೆಯೇ ವ್ಯತ್ಯಾಸ ಇದೆ. ನಮ್ಮ ಪಕ್ಷದಲ್ಲಿ ವ್ಯತ್ಯಾಸ ಇರಲ್ವ. ಎಲ್ಲಾ ಪಕ್ಷದಲ್ಲೂ ಇದ್ದೇ ಇರುತ್ತದೆ. ಹೈಕಮಾಂಡ್ ಸರಿಪಡಿಸಲಿದೆ. ಮೈತ್ರಿಕೂಟದ ಯಾರೇ ಅಭ್ಯರ್ಥಿ ಆದರೂ ಗೆಲ್ಲಿಸಿಕೊಳ್ಳಲು ಒಗ್ಗಟ್ಟಿನ ಹೋರಾಟ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಸುರೇಶ್ ಗೌಡ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕಾವೇರಿ ಪ್ರಾಧಿಕಾರಕ್ಕೆ ವಾಸ್ತವ ಸ್ಥಿತಿ ಮನವರಿಕೆ ಮಾಡಲಾಗಿದೆ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ