ಮಂಡ್ಯ:ಕೆಆರ್‌ಎಸ್ ಡ್ಯಾಂನಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಬಂದಿರುವ ಬೆನ್ನಲ್ಲೇ ನೀರು ಬೀಡುವಂತೆ ತಮಿಳುನಾಡು ಬೇಡಿಕೆ ಇಟ್ಟಿದೆ ಎಂದು ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು. ಕನ್ನಡ ನಾಡಿನ ಕಾವೇರಿ ನೀರಿಗಾಗಿ ಮತ್ತೆ ತಮಿಳುನಾಡು ಕ್ಯಾತೆ ತೆಗೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಎನ್ ಚಲುವರಾಯಸ್ವಾಮಿ, ಕೆಆರ್‌ಎಸ್ ಡ್ಯಾಂನಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಬಂದಿದೆ. ಆದರೆ ಇಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಇದರ ಬೆನ್ನಲ್ಲೇ ನೀರು ಬೀಡುವಂತೆ ತಮಿಳುನಾಡು ಬೇಡಿಕೆ ಇಟ್ಟಿದೆ. ಕೇಂದ್ರದ ಮಾನಿಟ್ರಿ ಕಮಿಟಿಯಲ್ಲಿ ತಮಿಳುನಾಡಿನಿಂದ ನೀರಿಗಾಗಿ ಪ್ರಸ್ತಾಪ ಮಾಡಲಾಗಿದೆ. ಬಿಡಬೇಕಾದ ನೀರು ಬಿಡಿ ಎಂದು ತಮಿಳುನಾಡಿನ ಬೇಡಿಕೆ. ಕಾವೇರಿ ನೀರಾವರಿ ಸಮಿತಿಯ ಸಭೆಯ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ತಮಿಳುನಾಡಿಗೆ ನೀರು ಬಿಡದ ಪರಿಸ್ಥಿತಿಯಿದೆ: ರಾಜ್ಯದಲ್ಲಿ ಮಳೆ ಕೈಕೊಟ್ಟಿದ್ದರಿಂದ ನೀರಿನ ಸಮಸ್ಯೆ ಎದುರಾಗಿದೆ. ಒಂದು ಕಡೆಗೆ ಕುಡಿಯಲು ನೀರು ಬೇಕಾಗಿದೆ. ಇನ್ನೊಂದೆಡೆ ಕೇಂದ್ರದ ಮಾನಿಟ್ರಿಂಗ್ ಕಮಿಟಿಯಲ್ಲಿ ತಮಿಳುನಾಡು ನೀರು ಕೇಳಿದೆ. ತಮಿಳುನಾಡಿಗೆ ನೀರು ಬಿಡದ ಪರಿಸ್ಥಿತಿ ಇದೆ. ರೈತರ ಬೆಳಗಳಿಗೂ ತೊಂದರೆಯಾಗುತ್ತಿದೆ. ಇದನ್ನು ಸಿಎಂ ಹಾಗೂ ನೀರಾವರಿ ಸಚಿವರ ಜೊತೆ ಚರ್ಚೆ ಮಾಡುತ್ತೇವೆ. ತಮಿಳುನಾಡಿಗೆ ವಾಡಿಕೆ ಪ್ರಕಾರ ಬಿಡಬೇಕಾದ ನೀರನ್ನು ಕೇಳಿದ್ದಾರೆ. ಕುಡಿಯುವ ನೀರಿಗೆ ಸಮಸ್ಯೆ ಇರುವಾಗ ತಮಿಳುನಾಡಿಗೆ ನೀರು ಬಿಡಲು ಹೇಗೆ ಸಾಧ್ಯ? ಈ ತಿಂಗಳ ಅಂತ್ಯಕ್ಕೆ ಮಳೆ ಬೀಳುತ್ತೆ ಅಂತಾ ಹೇಗೆ ಅಂದುಕೊಳ್ಳುವುದು. ಈ ಬಗ್ಗೆ ನಾವು ಸಭೆ ನಡೆಸಲಿದ್ದೇವೆ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರನ್ನು ರೈತನ ಮಗ ಅಂತಾರಾ?: ಭ್ರಷ್ಟಾಚಾರಕ್ಕೆ ಜಾತಿ ಇದ್ಯಾ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಮಂಡ್ಯದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ, ನಾನು ಕೂಡ ಭ್ರಷ್ಟಾಚಾರದಲ್ಲಿ ಜಾತಿ ಇದೇ ಅಂತ ಹೇಳಿಲ್ಲ. ಸದನದಲ್ಲಿ ಎರಡು ದಿನ ಆ ಕುರಿತು ಚರ್ಚೆಯಾಗಿದೆ. ಸದನದ ವಿಷಯವನ್ನು ಹೊರಗಡೆ ತಂದು ಮಾತನಾಡೋದು ಸೂಕ್ತವಲ್ಲ ಎಂದು ತಿರುಗೇಟು ನೀಡಿದರು.
ಅವರು ಮಾಜಿ ಪ್ರಧಾನಿ ಮಗ ಅಂತಾ ಮಾತಾಡ್ತಾರೆ. ಮಾಜಿ ಪ್ರಧಾನಿ ಮಗ, ದೇವೇಗೌಡರ ಮಗ ಅಂತ ಎಲ್ಲರಿಗೂ ಗೊತ್ತಲ್ವ. ದೇವೇಗೌಡರ ಹೆಸರನ್ನು ಏಕೆ ಕುಮಾರಸ್ವಾಮಿ ತೆಗೆದುಕೊಳ್ಳಬೇಕು.? ಒಕ್ಕಲಿಗರು, ಜಿಲ್ಲೆಯಲ್ಲಿ 6 ಜನರು ಗೆದ್ದಿದ್ದನ್ನು ಸಹಿಸಲು ಆಗುತ್ತಿಲ್ಲ. ಡಿ ಕೆ ಶಿವಕುಮಾರ್, ಚಲುವರಾಯಸ್ವಾಮಿ ಬಗ್ಗೆ ಹರಿಹಾಯ್ದರೇ ಅನುಕೂಲ ಆಗುತ್ತೆ ಅಂತಾ ಮಾತಾಡ್ತಿದ್ದಾರೆ. ನಾನು ಒಬ್ಬ ಸಾಮಾನ್ಯ ರೈತನ ಮಗ. ದೇವೇಗೌಡರನ್ನು ರೈತನ ಮಗ ಅಂತಾರೆ. ಆದರೆ ಕುಮಾರಸ್ವಾಮಿ ಅವರನ್ನು ರೈತನ ಮಗ ಅಂತಾರಾ?, ದೇವೇಗೌಡರ ಮಗ ಅಂತಾರೆ. ಕುಮಾರಸ್ವಾಮಿಯವರಿಗೆ ಒಳ್ಳೆಯದಾಗ್ಲಿ, ಸಂದರ್ಭ ಬಂದಾಗ ಉತ್ತರಕೊಡ್ತೇನೆ ಎಂದು ವಾಗ್ದಾಳಿ ನಡೆಸಿದರು.
ಇನ್ನೂ ಮಾಜಿ ಸಿ ಎಂ ಕುಮಾರಸ್ವಾಮಿ ವರ್ಗಾವಣೆ ರೇಟ್ ಕಾರ್ಡ್ ಬಿಡುಗಡೆ ವಿಚಾರಕ್ಕೆ ಮಾತನಾಡಿ ನಾನು ರೇಟ್ ಕಾರ್ಡ್ ತೋರಿಸಿದ್ದೀನಲ್ಲ. 2019 ರಲ್ಲಿ ಬಿಡುಗಡೆ ಆಗಿತ್ತು. ಅದೇ ರೇಟ್ ಕಾರ್ಡ್ ಅನ್ನು ಅಸೆಂಬ್ಲಿಯಲ್ಲಿ ತೋರಿಸಿದ್ದೇನೆ. ಅದರ ಬಗ್ಗೆ ಪ್ರಸ್ತಾಪ ಮಾಡೋದು ಬೇಡಾ. ಅವರಿಗೆ ನನ್ನ ಮೇಲೆ ದ್ವೇಷವಿದ್ಯೋ?. ಪ್ರೀತಿ ಇದ್ಯೋ ಅವರಿಗೆ ಬಿಟ್ಟಿದ್ದು ಎಂದರು.
ಇದನ್ನೂಓದಿ:ಚಿರತೆ ದಾಳಿಗೆ ಬಲಿಯಾದ ಬಾಲಕಿಯ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ: ಸಚಿವ ಈಶ್ವರ್ ಖಂಡ್ರೆ