ಮಂಡ್ಯ : ಹೋಟೆಲ್ವೊಂದರಲ್ಲಿ ತಾವು ಕುಡಿದು ಗಲಾಟೆ ಮಾಡಿದ್ದಾಗಿ ಪತ್ರಿಕೆಯೊಂದು ಮಾಡಿದ್ದ ಸುದ್ದಿ ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿರುವ, ಜೆಡಿಎಸ್ ನಾಯಕ, ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಕುಡಿಯುವುದು ಬಿಟ್ಟು ಎಂಟು ವರ್ಷವಾಗಿದೆ ಎಂದು ಹೇಳಿದ್ದಾರೆ.
ಮಳವಳ್ಳಿಯಲ್ಲಿ ಅನಾರೋಗ್ಯದಿಂದ ಮೃತನಾದ ಜೆಡಿಎಸ್ ಕಾರ್ಯಕರ್ತನ ಮನೆಗೆ ಭೇಟಿ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ನಿಖಿಲ್ ಸೋತಿದ್ರಿಂದ ಧೃತಿಗೆಟ್ಟು ಕುಡಿದು ಗಲಾಟೆ ಮಾಡಿದ್ದಾರೆಂದು ಪತ್ರಿಕೆಯೊಂದು ಸುಳ್ಳಿ ಸುದ್ದಿ ಪ್ರಕಟಿಸಿತ್ತು. ಆದ್ರೆ ಆ ರೀತಿ ಬರೆಯುವ ಮುನ್ನ ಆ ಮಾಹಿತಿ ಸರಿ ಇದ್ಯಾ ಇಲ್ವಾ ಅನ್ನೋದನ್ನ ಪರಿಶೀಲನೆ ಮಾಡಿ. ಈ ಸಂಗತಿ ನನಗೆ ಬಹಳ ನೋವುಂಟು ಮಾಡಿದೆ ಎಂದರು.
ಕಾಲೇಜು ಟೈಂ ನಲ್ಲಿ ನಾನು ಕುಡಿಯುತ್ತಿದ್ದೆ. ಎಂಟು ವರ್ಷ ಆಯ್ತು ನಾನು ಕುಡಿಯುವುದು ಬಿಟ್ಟು. ಆರೋಗ್ಯದ ದೃಷ್ಟಿಯಿಂದ, ಸಾರ್ವಜನಿಕ ಬದುಕಲ್ಲಿ ಇರುವುದರಿಂದ ನಾನು ಕುಡಿಯುವುದು ಬಿಟ್ಟಿದ್ದೀನಿ. ದೇವೇಗೌಡರ ಮುಂದೆ ನಿಂತುಕೊಂಡು ಮಾತನಾಡುವ ಧೈರ್ಯ ನನಗಿಲ್ಲ. ಹೀಗಿರುವಾಗ ನಾನು ಕುಡಿದು ಅವ್ರ ಮುಂದೆ ನಿಲ್ಲಲು ಸಾಧ್ಯಾನಾ ಎಂದು ಪ್ರಶ್ನೆ ಮಾಡಿದರು.
ನನ್ನ ಧೃತಿಗೆಡಿಸುವುದಕ್ಕೆ ಸಾಧ್ಯವಿಲ್ಲ. ನಾನು ಪ್ರತಿನಿತ್ಯ ಕುಮಾರಸ್ವಾಮಿ, ದೇವೆಗೌಡರ ಜೊತೆ ಚರ್ಚೆ ಮಾಡ್ತಿದ್ದೀನಿ. ಅವರ ರಾಜಕೀಯ ಅನುಭವವನ್ನ ನನಗೆ ಹೇಳಿಕೊಡ್ತಿದ್ದಾರೆ. ನನಗೆ ಚುನಾವಣೆಗೆ ನಿಲ್ಲಲು ಅವಕಾಶ ಮಾಡಿಕೊಟ್ಟ ಜಿಲ್ಲೆಯ ಶಾಸಕರು ಕಾರ್ಯಕರ್ತರಿಗೆ ಧನ್ಯವಾದ. ನಾನು ಜೆಡಿಎಸ್ ಕಾರ್ಯಕರ್ತರ ಪರವಾಗಿ ಸಾಯುವವರೆಗೂ ಇರುತ್ತೇನೆ ಎಂದರು. ಆ ಮಾತು ಚುನಾವಣೆಗೆ ಮಾತ್ರ ಸೀಮಿತ ಅಲ್ಲ. ಮನೆ ಬಳಿ ಸಿಎಂ ನೋಡಲು ರಾಜ್ಯದ ಹಲವೆಡೆಯಿಂದ ಜನರು ಬರುತ್ತಾರೆ. ಕೆಲಸದ ಒತ್ತಡದಿಂದ ಎಲ್ಲರನ್ನೂ ಸಿಎಂ ಭೇಟಿ ಮಾಡಲು ಸಾಧ್ಯವಿಲ್ಲ. ಆ ವೇಳೆ ಜನರ ಸಮಸ್ಯೆಗೆ ಅವರ ಮನೆ ಬಳಿ ಹೋಗಿ ಸ್ಪಂದಿಸುತ್ತಿದ್ದೇನೆ ಎಂದರು.
ರಾಜ್ಯಾಧ್ಯಕ್ಷ ಸ್ಥಾನ, ಯುವ ಘಟಕಕ್ಕೆ ಅಧ್ಯಕ್ಷ ಸ್ಥಾನ ಪಡೆಯಲು ನನಗಿನ್ನು ಅನುಭವದ ಅವಶ್ಯಕತೆ ಇದೆ. ನಾನು ಕಾರ್ಯಕರ್ತನಾಗೆಯೇ ಜೆಡಿಎಸ್ ಪಕ್ಷಕ್ಕಾಗಿ ದುಡಿಯುತ್ತೇನೆ. ಚಲುವಣ್ಣನಿಗೆ ಇವತ್ತು ಕಾವೇರಿ ನೀರಿನ ಬಗ್ಗೆ ಕಾಳಜಿ ಬಂದಿದೆ. ಆರಸಿ ಕಳಿಸಿರುವ ಸಂಸದರು ಕಾವೇರಿ ವಿಚಾರವಾಗಿ ಹೋರಾಟ ಮಾಡ್ತಾರೆ. ಬಿಜೆಪಿ ಬೆಂಬಲ ನೂತನ ಸಂಸದರಿಗಿದೆ, ಸಖತ್ ಶಕ್ತಿಶಾಲಿ ಅವ್ರು. ನಾವೆಲ್ಲಾ ಯಾರು..ನಾವೆಲ್ಲಾ ಸಣ್ಣವರು. ಹೋರಾಟ ಮಾಡ್ತಾರೆ ಜನರ ನಿರೀಕ್ಷೆ ತಕ್ಕಂತೆ ಅವ್ರು ಕೆಲಸಮಾಡ್ತಾರೆ ಎಂದರು.
ನಿಖಿಲ್ ನೂತನ ನಿವಾಸದ ಹೆಸರು 'ನಿಮ್ಮ ಮನೆ':
ಮಂಡ್ಯ ನಗರಕ್ಕೆ ಒಂದು ಕಿ.ಮೀ. ದೂರದಲ್ಲೇ ತೋಟ ಖರೀದಿ ಆಗಿದೆ. 'ನಿಮ್ಮ ಮನೆ' ಎಂದು ಹೆಸರಿಡುತ್ತೇನೆ. ನಾನು ಮನೆಯಲ್ಲಿ ಇಲ್ಲ ಅಂದ್ರೂ ಯಾರು ಬೇಕಾದರೂ ಮನೆಗೆ ಬರಬಹುದು. 15 ದಿನದೊಳಗೆ ಎಲ್ಲಾ ಪ್ರಕ್ರಿಯೆ ಪೂರ್ಣವಾಗಲಿದೆ ಎಂದರು.