ಮಂಡ್ಯ : ನಾಲೆಗಳಿಗೆ ಕೆ.ಆರ್.ಎಸ್ ನಿಂದ ನೀರು ಬಿಡೋ ವಿಚಾರವಾಗಿ ಕೇಳಿದ ಪ್ರಶ್ನೆಗೆ ಸಚಿವ ಎಚ್.ಡಿ. ರೇವಣ್ಣ ನಾನು ರೋಡ್ ಮಂತ್ರಿ, ನೀರಿನ ಮಂತ್ರಿ ಅಲ್ಲ. ರೋಡ್ ಬಗ್ಗೆ ಕೇಳಿ ಅಂತ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಜಿಲ್ಲೆಯಲ್ಲಿ ಒಂದು ಸಾವಿರ ಕೋಟಿ ರೂಪಾಯಿಗಳ ಕಾಮಗಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡುತ್ತಿದ್ದಾಗ ನೀರು ಬಿಡುಗಡೆ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದ್ದಾರೆ. ನಾವು ಮಂಡ್ಯ ವಿಚಾರವಾಗಿ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಮಾಡೋದೂ ಇಲ್ಲ. ಮಾಡಿದ್ದರೆ ಕಾಮಗಾರಿಗಳು ನಿಲ್ಲುತ್ತಿದ್ದೋ, ಯಾರೋ ಮಾಡಿದ ಆರೋಪಕ್ಕೆ ಉತ್ತರ ಕೊಡುವ ಅಗತ್ಯವಿಲ್ಲ ಎಂದರು.
ಕಾವೇರಿ ವಿಚಾರವಾಗಿ ಪ್ರಜ್ವಲ್ ಸದನದಲ್ಲಿ ಧ್ವನಿ ಎತ್ತಿದ್ದಾರೆ. ನನಗೆ ಇಲ್ಲಿ ನೀರು ಎಷ್ಟಿದೆ ಅನ್ನೋದು ಗೊತ್ತಿಲ್ಲ. ಗೊತ್ತಿದ್ದರೆ ಮಾತನಾಡುವೆ. ಹೇಮಾವತಿಯದ್ದು ಗೊತ್ತಿದೆ. ಅಧಿಕಾರಿಗಳು 15 ದಿನಗಳ ವರೆಗೆ ಕುಡಿಯುವ ನೀರು ಸಿಗುತ್ತೆ ಎಂದು ಹೇಳಿದ್ದಾರೆ ಎಂದರು.
ತಮಿಳುನಾಡಿನ ಅಧಿಕಾರಿಗಳು ರಾಜ್ಯ ಸರ್ಕಾರದ ಗಮನಕ್ಕೂ ತಾರದೇ ಎಲ್ಲ ಜಲಾಶಯಗಳ ನೀರಿನ ಮಟ್ಟವನ್ನು ತಿಳಿದುಕೊಂಡು ಹೋಗಿದ್ದಾರೆ. ಸಂಪೂರ್ಣ ಮಾಹಿತಿ ಅವರ ಬಳಿ ಇದೆ. ಕೆ.ಆರ್.ಎಸ್, ಹಾರಂಗಿ, ಹೇಮಾವತಿ, ಗೊರೂರು, ಯಗಚಿ ಸೇರಿದಂತೆ ಕಾವೇರಿ ಕೊಳ್ಳದ ಅಣೆಕಟ್ಟೆಗಳ ಮಾಹಿತಿ ಸಂಗ್ರಹ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.