ಮಂಡ್ಯ: ನನ್ನ ಗೆಲುವಿಗೆ ಕಾಂಗ್ರೆಸ್ ಬಿಜೆಪಿ ಎರಡೂ ಪಕ್ಷಗಳ ಕಾರ್ಯಕರ್ತರ ಶ್ರಮವಿದೆ. ಆದರೆ, ನಾನು ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದನ್ನೇ ಪ್ರಶ್ನಿಸುತ್ತಿರುವುದು ಲಾಜಿಕ್ ಎಂಬಂತೆ ತೋರುತ್ತಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಅಸಮಾಧಾನ ಹೊರ ಹಾಕಿದರು.
ಸಂಸದೆ ಸುಮಲತಾ ಬಿಜೆಪಿ ಕಚೇರಿ ಭೇಟಿ ಕುರಿತು ಎದ್ದಿದ್ದ ವಿವಾದಕ್ಕೆ ಪ್ರತಿಕ್ರಿಯಿಸಿ ಅಸಮಾಧಾನ ಹೊರಹಾಕಿರುವ ಅವರು, ನನ್ನನ್ನು ಬಿಜೆಪಿ ಕಚೇರಿಗೆ ಆಹ್ವಾನಿಸಲಾಗಿತ್ತು. ಹೀಗಾಗಿ ಕೃತಜ್ಞತೆ ಸಲ್ಲಿಸಲು ಅಲ್ಲಿಗೆ ಹೋಗಿದ್ದೆ. ಈ ವಿಚಾರಕ್ಕೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದರು.
ಚುನಾವಣೆ ವೇಳೆ ನನ್ನ ಗೆಲುವಿಗೆ ಶ್ರಮಿಸಿದ ಎರಡು ಪಕ್ಷಕ್ಕೂ ಧನ್ಯವಾದ ಹೇಳೊದು ನನ್ನ ಕರ್ತವ್ಯ. ಇದನ್ನು ಸರಿ ಇಲ್ಲ ಅಂತಾ ಹೇಳೋದರಲ್ಲಿ ಲಾಜಿಕ್ಕೇ ಇಲ್ಲ. ಅದರಲ್ಲೂ ನಾನು ಪಕ್ಷೇತರ ಸಂಸದೆಯಾಗಿದ್ದು, ದಯವಿಟ್ಟು ನನ್ನನ್ನ ತಡೆಯುವ ಕೆಲಸವಾಗಲಿ, ಇಲ್ಲದ ಒತ್ತಡ ಹೇರೋಕೆ ಬರಬೇಡಿ ಎಂದು ಮನವಿ ಮಾಡಿದರು.
ಮುಂದುವರೆದು ಮಾತನಾಡಿದ ಅವರು, ನನಗೆ ಧನ್ಯವಾದ ಹೇಳೋಕೆ ಒಂದು ಸ್ಥಳ ಬೇಕಿತ್ತು, ಹಾಗಾಗಿ ಅವರ ಕಚೇರಿಗೆ ಹೋಗಿ ಹೇಳಿ ಬಂದೆ. ಆದ್ರೆ ಕಾಂಗ್ರೆಸ್ ಪಕ್ಷದಿಂದ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಅಲ್ಲದೇ ಕಾಂಗ್ರೆಸ್ ನಾಯಕರು ಯಾರು ಈ ಬಗ್ಗೆ ಮಾತುಕತೆ ನಡೆಸಿಲ್ಲ ಎಂದರು.