ಮಂಡ್ಯ: ಕಾಡು ಹಂದಿಯ ಶಿಕಾರಿಗೆ ಬಂದಿದ್ದ ಗ್ಯಾಂಗ್ ಯುವಕನೊಬ್ಬನ ಮೇಲೆ ಫೈರಿಂಗ್ ಮಾಡಿದೆ. ಈ ವೇಳೆ ಬುದ್ಧಿವಂತಿಕೆಯಿಂದ ಆ ಗ್ಯಾಂಗ್ ಹಿಡಿದ ಗ್ರಾಮಸ್ಥರು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಗಡಿ ಗ್ರಾಮ ಮೇಳಾಪುರದಲ್ಲಿ ಘಟನೆ ನಡೆದಿದ್ದು, 21 ವರ್ಷದ ಮಾದೇಶ್ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಮೈಸೂರು ಮೂಲದ 6 ಮಂದಿ ಯುವಕರ ಗ್ಯಾಂಗ್ ಎರಡು ನಾಡಬಂದೂಕು ಬಳಸಿ ಮೇಳಾಪುರದ ಜಮೀನೊಂದರಲ್ಲಿ ಕಾಡು ಹಂದಿ ಬೇಟೆಗೆ ಮುಂದಾಗಿತ್ತು. ಈ ವೇಳೆ ಫೈರಿಂಗ್ ಮಾಡಿದ್ದು, ಜಮೀನಿನ ಪಕ್ಕದಲ್ಲಿದ್ದ ಮನೆಯ ಗೋಡೆಗೆ ಒಂದು ಗುಂಡು ಬಿದ್ದಿದೆ. ಹಾಗೇ ಮತ್ತೊಂದು ಹಸುವಿಗೆ ಮೇವು ಹಾಕುತ್ತಿದ್ದವನ ಹೊಟ್ಟೆ ಸೀಳಿದೆ. ಇದ್ರಿಂದ ಕುಸಿದು ಬಿದ್ದ ಮಾದೇಶನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಈ ವೇಳೆ ಬುದ್ಧಿವಂತಿಕೆ ಪ್ರದರ್ಶಿಸಿದ ಗ್ರಾಮಸ್ಥರು, ಕಾಡು ಹಂದಿ ಬಿದ್ದಿದೆ ಎಂದು ಯುವಕರ ತಂಡವನ್ನು ಹತ್ತಿರಕ್ಕೆ ಕರೆದು ಆರು ಮಂದಿಯಲ್ಲಿ ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಉಳಿದ ಮೂವರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಎರಡು ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ. ಎರಡು ಬಂದೂಕುಗಳು ಕೊಡಗು ಜಿಲ್ಲೆಯದ್ದಾಗಿದ್ದು, ಒಂದಕ್ಕೆ ಲೈಸೆನ್ಸ್ ಇದ್ದರೆ, ಮತ್ತೊಂದಕ್ಕೆ ಲೈಸೆನ್ಸ್ ರಿನೀವಲ್ ಆಗಿಲ್ಲ. ಬಂದೂಕು ನೀಡಿದವರ ಮೇಲೂ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ಸಾಮಾನ್ಯವಾಗಿ ಅರಣ್ಯ ಪ್ರದೇಶಗಳಲ್ಲಿ ಬೇಟೆ ನಡೆಯುತ್ತಿತ್ತು. ಆದ್ರೆ ಕಬ್ಬಿನ ಗದ್ದೆಯಲ್ಲಿ ಬಂದೂಕು ಹಿಡಿದು ಹಂದಿ ಬೇಟೆಗೆ ಬಂದಿದ್ದ ಗ್ಯಾಂಗ್ ಕಂಡು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.