ಮಂಡ್ಯ : ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ನಡೆಯುವ ದೀವಟಿಗೆ ಸಲಾಂ (ಆದಾ ಸಲಾಂ) ನಿಲ್ಲಿಸುವಂತೆ ಧಾರ್ಮಿಕ ಪರಿಷತ್ನ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಹಿಂದೂ ಧರ್ಮದ ಆಚರಣೆಗೆ ವಿರುದ್ಧವಾಗಿ ನಡೆಯುತ್ತಿರುವ ಆಚರಣೆ ಇದಾಗಿದ್ದು, ಈ ಆಚರಣೆಯನ್ನು ನಿಲ್ಲಿಸುವಂತೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಧಾರ್ಮಿಕ ಪರಿಷತ್ ಸದಸ್ಯ ನವೀನ್, 'ಮೇಲುಕೋಟೆ ಚೆಲುವನಾರಾಯಣ ಸ್ವಾಮಿಗೆ ಪ್ರತಿನಿತ್ಯ ಸಂಜೆ 7 ಗಂಟೆಗೆ ದೀವಟಿಗೆ ಸಲಾಂ ಎಂದು ಆರತಿ ಮಾಡಲಾಗುತ್ತದೆ. ಟಿಪ್ಪು ಸುಲ್ತಾನ್ಗೆ ಗೌರವವನ್ನು ಸೂಚಿಸುವ ಉದ್ದೇಶದಿಂದ ಆರತಿ ಮಾಡಲಾಗುತ್ತದೆ. ನಾವು ಅದನ್ನು ವಿರೋಧಿಸುತ್ತೇವೆ.
ಏಕೆಂದರೆ, ನಮ್ಮ ಹಿಂದೂ ಧರ್ಮದ ಸನಾತನ ಸಂಸ್ಕೃತಿಯಲ್ಲಿ ಮತ್ತೊಂದು ಧರ್ಮಕ್ಕೆ ಮಾನ್ಯತೆ ನೀಡುವ ಪರಿಕಲ್ಪನೆ ಎಲ್ಲೂ ಇಲ್ಲ. ಅದು ತಪ್ಪು. ಅವರು ಯಾವುದೇ ಮಸೀದಿಯಲ್ಲಿ ಹಿಂದೂ ಸಂಸ್ಕೃತಿಗೆ ಯಾವುದೇ ಮಾನ್ಯತೆ ಕೊಟ್ಟಿಲ್ಲ. ಆದ್ದರಿಂದ ಆರತಿಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಪರ್ಕ ಪ್ರಮುಖ್ ಪಂಚಾಕ್ಷರಿ ಗಂಗಡ್ಕರ್, ಮೇಲುಕೋಟೆ ಚೆಲುವ ನಾರಾಯಣಸ್ವಾಮಿಗೆ ತ್ರಿಕಾಲದಲ್ಲಿ ಮಹಾಮಂಗಳಾರತಿಯನ್ನು ಮಾಡಲಾಗುತ್ತದೆ. ಈ ವೇಳೆ ಟಿಪ್ಪುವಿನ ತನ್ನ ದಾಸ್ಯವನ್ನು ಹೇರಲು ದೀವಟಿಗೆ ಸಲಾಂ ಅನ್ನು ನಡೆಸಿದ್ದು, ಇದುವರೆಗೆ ಇದು ನಡೆದುಕೊಂಡು ಬರುತ್ತಿದೆ. ಆದ್ದರಿಂದ ಸಲಾಂ ಎಂಬ ಹೆಸರನ್ನು ತೆಗೆಯಬೇಕೆಂದು ಮನವಿ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಹಿಂದೂ ಯುವಕರು ಮಟನ್ ಸ್ಟಾಲ್ ಇಡಲು ನಾನೇ ಹಣ ನೀಡುತ್ತೇನೆ: ರೇಣುಕಾಚಾರ್ಯ