ಮಂಡ್ಯ: ಭೂಸ್ವಾಧೀನ ಪರಿಹಾರ ನೀಡದೆ ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭಿಸಿರುವುದನ್ನು ಪ್ರತಿಭಟಿಸಿ ಕೆ.ಆರ್. ಪೇಟೆ ತಾಲೂಕಿನ ಮಾಡಹೊಳಲು ಗ್ರಾಮದ ರೈತ ದಂಪತಿ ನಡುರಸ್ತೆಯಲ್ಲಿಯೇ ಆಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಕೆ.ಆರ್. ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮಾಡಹೊಳಲು ಗ್ರಾಮದ ರೈತ ಪುಟ್ಟರಾಜು ಅವರಿಗೆ ಗ್ರಾಮ ಸಮೀಪದ ವಡ್ಡರಗುಡಿ ಎಲ್ಲೆಗೆ ಸೇರಿದ ಸರ್ವೇ ನಂ 6/6 ರಲ್ಲಿ 13.5 ಗುಂಟೆ ಕೃಷಿ ಭೂಮಿಯಿದೆ. ಕೆಆರ್‌ಪೇಟೆ ತಾಲೂಕಿನ ಮೂಲಕ ಹಾದು ಹೋಗಿರುವ ಬೆಂಗಳೂರು- ಜಲಸೂರು ಹೆದ್ದಾರಿ ಸದರಿ ರೈತರ ಜಮೀನಿನ ಮೂಲಕ ಹಾದುಹೋಗುತ್ತಿದೆ. ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ರಾಜ್ಯ ಸರ್ಕಾರಿ ಸ್ವಾಮ್ಯದ ಕೆಶಿಪ್ ಸಂಸ್ಥೆ ಕೈಗೆತ್ತಿಕೊಂಡಿದ್ದು, ಕೆಎನ್‌ಆರ್‌ಸಿಎಲ್ ಕಂಪನಿ ಗುತ್ತಿಗೆ ಕಾಮಗಾರಿ ನಡೆಸುತ್ತಿದೆ.
ಹೆದ್ದಾರಿ ಕಾಮಗಾರಿ ನಿರ್ಮಾಣಕ್ಕೆ ಮುನ್ನ ಕೆಶಿಪ್ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ನಡೆಸಿದ್ದರೂ ಜಮೀನು ವಿವಾದದ ಕಾರಣ ಪರಿಹಾರದ ಹಣ ನೀಡಿಲ್ಲ. ಭೂಸ್ವಾಧೀನವಾದ ಜಮೀನಿಗೆ 6.30 ಲಕ್ಷ ರೂ. ಪರಿಹಾರ ನಿಗದಿಯಾಗಿದ್ದು, ಭೂಸ್ವಾಧೀನವಾದ ಕಾಲದಲ್ಲಿಯೇ ವಡ್ಡರಗುಡಿಯ ರಾಜಶೆಟ್ಟಿ ಎನ್ನುವ ವ್ಯಕ್ತಿ ತಕರಾರು ತೆಗೆದಿದ್ದ. ಇದರ ಪರಿಣಾಮ ಭೂವಿವಾದ ಪಾಂಡವಪುರ ಎಸಿ ನ್ಯಾಯಾಲಯದ ಕಟಕಟೆ ಏರಿತ್ತು.
ಉಪವಿಭಾಗಾಧಿಕಾರಿ ತೀರ್ಪು ಪ್ರತಿ ನೀಡಿಲ್ಲ: ಈ ಪ್ರಕರಣ ಇತ್ಯರ್ಥವಾಗಿ 6 ತಿಂಗಳು ಕಳೆದಿದ್ದರೂ ಉಪವಿಭಾಗಾಧಿಕಾರಿ ರಾಜಕೀಯ ಒತ್ತಡಕ್ಕೊಳಗಾಗಿ ಕೋವಿಡ್ ನೆಪದಲ್ಲಿ ಇದುವರೆಗೂ ತೀರ್ಪಿನ ಪ್ರತಿ ನೀಡಿಲ್ಲ. ಇದರಿಂದ ನನಗೆ ಪರಿಹಾರದ ಹಣ ಪಡೆಯಲು ಸಮಸ್ಯೆಯಾಗಿದೆ. ನ್ಯಾಯಾಲಯದ ತೀರ್ಪಿನ ಪ್ರತಿ ಕೈಸೇರಿ ನಮಗೆ ಪರಿಹಾರದ ಹಣ ಸಂದಾಯವಾಗುವವರೆಗೂ ಕಾಮಗಾರಿ ಮುಂದುವರಿಕೆಗೆ ನಾವು ಆಸ್ಪದ ನೀಡುವುದಿಲ್ಲ. ಇಲ್ಲಿ ಅಪಾಯ ಸಂಭವಿಸಿದರೆ ಕೆಶಿಪ್ ಅಧಿಕಾರಿಗಳು ಮತ್ತು ಪಾಂಡವಪುರ ಉಪವಿಭಾಧಿಕಾರಿ ನೇರ ಹೊಣೆ ಎಂದು ಪುಟ್ಟರಾಜು ಎಚ್ಚರಿಸಿದ್ದಾರೆ.