ಮಂಡ್ಯ: ಬೇಸಿಗೆ ಬಿಸಿಲ ತಾಪದಿಂದ ಸುಡುತ್ತಿದ್ದ ಸಕ್ಕರೆ ನಾಡಿನ ಹಲವು ಭಾಗಗಳಲ್ಲಿ ವರ್ಷದ ಮೊದಲ ವರುಣನ ಸಿಂಚನವಾಗಿದೆ. ವರುಣನ ಆರ್ಭಟಕ್ಕೆ ಜಿಲ್ಲೆಯ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಕಳೆದ ರಾತ್ರಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದ್ದು, ಬಹುತೇಕ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಯಿತು.
ಸಂಜೆ 7 ಕ್ಕೆ ಶುರುವಾದ ಮಳೆ ಸುಮಾರು 2 ಗಂಟೆಗಳಿಗೂ ಹೆಚ್ಚು ಸುರಿಯಿತು. ಈ ವೇಳೆ ಅಂಚೆ ಕಚೇರಿ ಆವರಣಕ್ಕೆ ಮಳೆ ನೀರು ನುಗ್ಗಿತು. ಮಹಾವೀರ ಸರ್ಕಲ್, ಹೊಸಹಳ್ಳಿ ಸರ್ಕಲ್, ಹೊಳಲು ವೃತ್ತ, ಎಸ್.ಡಿ.ಜಯರಾಂ ಸರ್ಕಲ್, ರೈಲ್ವೆ ಗೇಟ್ ಬಳಿ ಸಿಲ್ವರ್ ಜ್ಯುಬಿಲಿ ಪಾರ್ಕ್, ಅರಣ್ಯ ಇಲಾಖೆ ಕಚೇರಿ ಬಳಿ ಜಲಾವೃತಗೊಂಡು ಸಂಚಾರಕ್ಕೆ ಅಡ್ಡಿಯಾಗಿತ್ತು.
ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಅನೇಕ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅಷ್ಟೇ ಅಲ್ಲದೇ ಭಾರೀ ಮಳೆಯಿಂದಾಗಿ ಬಡ ಕುಟುಂಬವೊಂದು ಪಕ್ಕದ ಮನೆಯ ಛಾವಣಿಯಲ್ಲಿ ಇಡೀ ರಾತ್ರಿ ಕಳೆಯುತ್ತಿದೆ.
ಸಿಡಿಲು ಬಡಿದು ತೆಂಗಿನ ಮರ ಭಸ್ಮ...
ಸಕ್ಕರೆ ನಾಡು ಮಂಡ್ಯದಲ್ಲಿ ಸಿಡಿಲಿನ ಅಬ್ಬರಕ್ಕೆ ಜಿಲ್ಲೆಯ ಮದ್ದೂರು ತಾಲೂಕಿನ ಉಪ್ಪಿನಕೆರೆ ಗ್ರಾಮದ ಉಮೇಶ್ಗೆ ಸೇರಿ ತೆಂಗಿನ ಮರ ಧಗಧಗನೆ ಹೊತ್ತಿ ಉರಿಯಿತು.