ಮಂಡ್ಯ: ಹೇಮಾವತಿ ಜಲಾಶಯ ನೀರು ಹಂಚಿಕೆ ವಿಚಾರದಲ್ಲಿ ತುಮಕೂರು ಮತ್ತು ಮಂಡ್ಯ ಜನತೆಗೆ ಮಾಜಿ ಪ್ರಧಾನಿ ದೇವೇಗೌಡರು ವಂಚಿಸಿದ್ದಾರೆ ಎಂದುಹೆಚ್ ಟಿ ಕೃಷ್ಣಪ್ಪಆರೋಪಿಸಿದ್ದಾರೆ. ಅಲ್ಲದೆ, ದೇವೇಗೌಡರ ನಿಲುವು ಮತ್ತು ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದರು.
ನಾಗಮಂಗಲ ಪಟ್ಟಣದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಗೆ ಮತ್ತು ತುಮಕೂರು ಜಿಲ್ಲೆಗೆ ಹೇಮಾವತಿ ಜಲಾಶಯದ ನೀರಾವರಿ ಯೋಜನೆ ಕೊಟ್ಟವರು ಮಾಜಿ ಸಿಎಂ ದಿ. ದೇವರಾಜು ಅರಸು ಅವರೇ ಹೊರತು ಜೆಡಿಎಸ್ ವರಿಷ್ಠ ದೇವೇಗೌಡರಲ್ಲ. ಮಂಡ್ಯ, ನಾಗಮಂಗಲಕ್ಕೆ ಮತ್ತು ತುಮಕೂರು ಜಿಲ್ಲೆಗೆ ಹೇಮಾವತಿ ಜಲಾಶಯ ನೀರು ಹರಿಯಲು ಬಿಡದೆ ಅಂದು ವಂಚಿಸಿದ್ದ ರಾಜಕಾರಣಿ ದೇವೇಗೌಡರು. ಇಂದು ಅವರದಲ್ಲದ ಸಾಧನೆಯನ್ನು ತಮ್ಮದೆಂದು ಹೇಳಿಕೊಂಡು ಮತ ಕೇಳುತ್ತಿದ್ದಾರೆ. ಅವರಿಗೆ ನೈತಿಕತೆ ಇಲ್ಲವೇ ಎಂದು ಕೃಷ್ಣಪ್ಪ ಗುಡುಗಿದರು.
ನಾನು ಸಚಿವನಾಗಿದ್ದಾಗ ನಾಗಮಂಗಲಕ್ಕೆ ಯೋಜನೆ ತರುವ ಬಗ್ಗೆ ಪ್ರಸ್ತಾಪಿಸಿದಾಗಲೆಲ್ಲ ಗೇಲಿ ಮಾಡುತ್ತಿದ್ದರು. ಈಗ ದೇವೇಗೌಡರಿಗೆ ಮನಸಾಕ್ಷಿ ಇದೆಯೇ ಎಂದು ಕೃಷ್ಣಪ್ಪ ಪ್ರಶ್ನಿಸಿದರು.
ದೇವರಾಜು ಅರಸು ಚಾಲನೆಕೊಟ್ಟಿದ್ದ ಹೇಮಾವತಿ ಜಲಾಶಯದ ಯೋಜನೆಯನ್ನು 40 ವರ್ಷ ಕಳೆದರೂ ಯಾವ ಮುಖ್ಯಮಂತ್ರಿಗಳೂ ಇನ್ನೂ ಪೂರ್ಣಗೊಳಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಡಿಸಿಎಂ ಪರಮೇಶ್ವರ್ ಕೂಡ ಯಾರನ್ನೋ ಮೆಚ್ಚಿಸಲು ಈ ರೀತಿ ಸುಳ್ಳು ಹೇಳಬಾರದು ಎಂದು ಮಾಜಿ ಸಚಿವ ಚಾಟಿ ಬೀಸಿದರು.