ಮಂಡ್ಯ: ಸಮಾಜ ಒಡೆಯುವುದೇ ಕಾಂಗ್ರೆಸ್ ಸರ್ಕಾರದ ಉದ್ದೇಶ. ಪಾಪ ಕಾಂಗ್ರೆಸ್ನವರು ಸತ್ಯಹರಿಶ್ಚಂದ್ರನ ವಂಶದವರು ಎಂದು ಮಂಡ್ಯದಲ್ಲಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಜಾತಿಗಣತಿಗೆ ಒಕ್ಕಲಿಗರ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಸಿಎಂ ಟ್ವೀಟ್ ಅನ್ನು ನಾನು ಗಮನಿಸಿದ್ದೇನೆ. ರಾಹುಲ್ ಗಾಂಧಿ ಭಾವನೆಗೆ ಸ್ಪಂದಿಸಿ ಜಾತಿಗಣತಿ ಪಡೆಯುವ ನಿರ್ಧಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
"ಕಾಂತರಾಜು ವರದಿ ಮೂಲ ಪ್ರತಿ ಕಳ್ಳತನವಾದ ಮಾಹಿತಿ ಇದೆ. ಒಂದು ಕಡೆ ಮೂಲ ಪ್ರತಿ ಇಲ್ಲ. ಕಾಂತರಾಜು ವರದಿಯನ್ನು ಕುಮಾರಸ್ವಾಮಿ ತಿರಸ್ಕಾರ ಮಾಡಿದ್ರು ಎಂದು ಆರೋಪಿಸಿದ್ದರು. ನನ್ನ ಕಾಲದಲ್ಲಿ ಕಾಂತರಾಜು ವರದಿ ಸಂಪೂರ್ಣ ಸಿದ್ಧವಾಗಿದ್ದರೆ, ಇವರು ಅಧಿಕಾರ ಹಿಡಿದ 6 ತಿಂಗಳಲ್ಲೇ ಯಾಕೆ ವರದಿಗೆ ಒಪ್ಪಿಗೆ ಕೊಡಲಿಲ್ಲ. ಸಂಪೂರ್ಣ ಜನಗಣತಿ ಹಾಗೂ ಮನೆಗಳಿಗೆ ಭೇಟಿ ಕೊಟ್ಟಿಲ್ಲ. ಅವರಿಗೆ ಬೇಕಾದ ಹಾಗೇ ವರದಿ ಸಿದ್ಧವಾಗಿರುವುದು ಜಗಜ್ಜಾಹೀರಾಗಿದೆ."
"ರಾಷ್ಟ್ರೀಯ ನಾಯಕರ ಮೆಚ್ಚಿಸಲು ಈಗ ವರದಿ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ಕಾಂತರಾಜು ಕಮಿಟಿ ರಚನೆ ಮಾಡಿ 10 ವರ್ಷಗಳು ಕಳೆದಿವೆ. ಈ ಹತ್ತು ವರ್ಷಗಳಲ್ಲಿ ಹಲವಾರು ಬೆಳವಣಿಗೆ ಆಗಿವೆ. ಮನೆಯಲ್ಲಿ ಕುಳಿತು ಬರೆದರೋ ಇಲ್ಲಾ ಆಗಿನ ಸಿಎಂ ಬರೆಸಿದರೋ ಗೊತ್ತಿಲ್ಲ. ಅವತ್ತಿನ ಮೆಂಬರ್ ಸೆಕ್ರೆಟರಿ ವರದಿಗೆ ಸಹಿ ಹಾಕದಿರಲು ಕಾರಣವೇನು? ಸಮಾಜ ಒಡೆಯುವುದು ಕಾಂಗ್ರೆಸ್ ಸರ್ಕಾರದ ಉದ್ದೇಶ. ಸಮಾಜವನ್ನು ವಿಶ್ವಾಸ ತೆಗೆದುಕೊಳ್ಳುವುದು ಇವರಿಗೆ ಬೇಕಿಲ್ಲ." ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
"ಜಾತಿಯ ಹೆಸರಿನಿಂದ ನಾನು ವಿರೋಧ ವ್ಯಕ್ತಪಡಿಸಲ್ಲ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ಅವರೇ ಹೇಳುತ್ತಾರಲ್ವಾ? ಸುಳ್ಳೇ ನಮ್ಮ ಮನದೇವರು ಅಂತಾರೆ. ಪಾಪ ಇವರು ಸತ್ಯಹರಿಶ್ಚಂದ್ರ ವಂಶದವರು ಅಲ್ವಾ? ಕಳೆದ ಚುನಾವಣೆಯಲ್ಲಿ ಪೇಪರ್ ಪೆನ್ ಕೇಳಿದವರು ಇಂದು ಚರ್ಚೆ ಮಾಡಬೇಕು. ಇವರಿಗೆ ಅಧಿಕಾರ ಇದೆ, ಕ್ಯಾಬಿನೆಟ್‌ನಲ್ಲಿ ಸತ್ಯಾಂಶ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಬೇಕು" ಎಂದು ಒತ್ತಾಯಿಸಿದ್ದಾರೆ.
ಇನ್ನು ಬಿಜೆಪಿ ಹೇಳಿದರೆ ಕುಮಾರಸ್ವಾಮಿ ಚಡ್ಡಿನೂ ಹಾಕ್ತಾರೆ, ದತ್ತಮಾಲೆನೂ ಹಾಕ್ತಾರೆ ಎಂಬ ಚಲುವರಾಯಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು. ಚಲುವರಾಯಸ್ವಾಮಿ ಅವರನ್ನು ಯಾರವರು ಎಂದ ಕುಮಾರಸ್ವಾಮಿ, "ಸಿದ್ದರಾಮಯ್ಯ ಹೇಳಿದ್ರೆ ಅವರು ಏನು ಹಾಕಿಕೊಳ್ತಾರೆ. ಮೊದಲು ಅವರು ಏನು ಹಾಕ್ತಾರೆ ಎಂದು ಹೇಳಲಿ, ಅಮೇಲೆ ನಾನು ಏನು ಹಾಕ್ತೀನಿ ಎಂದು ಹೇಳ್ತೀನಿ" ಎಂದು ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಹೈಕಮಾಂಡ್ಗೆ ಗೊತ್ತಾಗಲೆಂದು ವಿಜಯೇಂದ್ರ, ಅಶೋಕ್ರಿಂದ ರಾಜ್ಯ ಸರ್ಕಾರದ ವಿರುದ್ಧ ಆರೋಪ: ಚಲುವರಾಯಸ್ವಾಮಿ