ಮಂಡ್ಯ: ಗ್ರಾಮ ಪಂಚಾಯತ್ ಚುನಾವಣೆ ಹತ್ತಿರ ಬರುತ್ತಿದ್ದು, ಅದಕ್ಕೂ ಮೊದಲೇ ಸದಸ್ಯತ್ವವನ್ನು ಹರಾಜು ಹಾಕಿದ ವಿಡಿಯೋವೊಂದು ಜಿಲ್ಲೆಯಲ್ಲಿ ಫುಲ್ ವೈರಲ್ ಆಗ ಬಾರಿ ಚರ್ಚೆ ಆಗಿತ್ತು. ಈ ಹರಾಜು ಪ್ರಕ್ರಿಯೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಚುನಾವಣಾ ಇಲಾಖೆ ತನಿಖೆಗೆ ಆದೇಶಿಸಿದೆ. ನೈಜತೆ ಪರಿಶೀಲಿಸಿ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಅವರು ನಾಗಮಂಗಲ ತಹಶೀಲ್ದಾರ್ಗೆ ಪತ್ರದ ಮೂಲಕ ಆದೇಶ ನೀಡಿದ್ದರಿಂದ ಗ್ರಾಮದ 10 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ: ಮಂಡ್ಯ ಗ್ರಾಪಂ ಸದಸ್ಯ ಸ್ಥಾನಗಳ ಹರಾಜಿನಲ್ಲಿ ಪಾಲ್ಗೊಂಡಿದ್ದವರ ವಿರುದ್ಧ ದೂರು
ನಾಗಮಂಗಲ ತಾಲೂಕಿನ ಗ್ರಾಮ ಪಂಚಾಯತ್ವೊಂದರ ವಾರ್ಡ್ನ 3 ಸದಸ್ಯ ಸ್ಥಾನಗಳ ಆಯ್ಕೆಗೆ ಹರಾಜು ಕೂಗಲಾಗಿತ್ತು. ಊರಿನ ಅಭಿವೃದ್ಧಿಯ ಹೆಸರಿನಲ್ಲಿ ಗ್ರಾಮದ ಹಿರಿಯರು ಪಂಚಾಯತ್ ಸ್ಥಾನವನ್ನು ಅವಿರೋಧವಾಗಿ ಆಯ್ಕೆ ಮಾಡುವ ಸಲುವಾಗಿ ಒಂದು ಸ್ಥಾನವನ್ನು 8.40 ಲಕ್ಷಕ್ಕೆ ಹರಾಜು ಕೂಗಲಾಗಿದೆ ಎಂಬ ಮಾಹಿತಿ ದೊರೆತಿದೆ. ಹೀಗೆ 3 ಸ್ಥಾನಗಳನ್ನು ಹರಾಜು ಕೂಗಲಾಗಿತ್ತು. ಈ ಪ್ರಕರಣ ಸಂಬಂಧ ಗ್ರಾಮದ 10 ಜನರ ಮೇಲೆ ಎಫ್ಐಆರ್ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ: ಮಂಡ್ಯದಲ್ಲೂ ಗ್ರಾ.ಪಂ. ಸದಸ್ಯತ್ವ ಹರಾಜು - ವಿಡಿಯೋ ವೈರಲ್
ಒಟ್ಟಾರೆ ಪಂಚಾಯತ್ ಸದಸ್ಯ ಸ್ಥಾನಗಳನ್ನು ಹಣಬಲದಿಂದ ಖರೀದಿಸಲು ಹೊರಟಿದ್ದವರಿಗೆ ಹಾಗೂ ಹರಾಜು ಹಾಕಿದವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ಮುಂದೆ ಯಾರೂ ಕೂಡ ಸದಸ್ಯ ಸ್ಥಾನಗಳಿಗೆ ಹರಾಜು ಕೂಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.