ಮಂಡ್ಯ: ಅವರವರಿಗೆ ಇಷ್ಟವಾದಂತೆ ಏನು ಹೇಳಿಕೆ ಬೇಕೋ ಅದನ್ನು ಕೊಡುತ್ತಾರೆ. ಯಾರಿಗೂ ಏನು ಹೇಳಿಕೆ ಕೊಡಬೇಕೆಂದು ಹೇಳಲು ಸಾಧ್ಯವಿಲ್ಲ. ಒಟ್ಟಾರೆ ಮೀಸಲಾತಿ ವಿಚಾರದಲ್ಲಿ ಸರ್ಕಾರ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳುತ್ತದೆ ಎಂದು ಡಿಸಿಎಂ ಅಶ್ವತ್ಥನಾರಾಯಣ ಹೇಳಿದರು.
ನಗರದಲ್ಲಿ ನಡೆದ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿಚಾರದ ಬಗ್ಗೆ ಸರ್ಕಾರ ಕಾನೂನು ಬದ್ಧವಾಗಿ ತೀರ್ಮಾನ ತೆಗೆದುಕೊಳ್ಳುತ್ತದೆ. ಇದಕ್ಕಿಂತ ಬೇರೇನೂ ಹೇಳಲು ಸಾಧ್ಯವಿಲ್ಲ ಎಂದರು.
ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹದ ಲೆಕ್ಕ ಕೊಡವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಲೆಕ್ಕ ಕೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ, ಲೆಕ್ಕ ಕೊಡುತ್ತೀವಿ. ಸಾರ್ವಜನಿಕವಾಗಿ ಪ್ರತಿಯೊಬ್ಬರು ದೇಣಿಗೆ ಕೊಟ್ಟಿದ್ದಾರೆ. ಇಲ್ಲಿ ಯಾರನ್ನು ಒತ್ತಾಯ ಮಾಡಿಲ್ಲ, ಎಲ್ಲರೂ ಸಹಕರಿಸಿದ್ದಾರೆ ಎಂದರು.
ಲೆಕ್ಕ ಕೊಡುತ್ತೇವೆ:
ದೇಣಿಗೆ ಸಂಗ್ರಹದ ಕುರಿತಂತೆ ಲೆಕ್ಕ ಕೊಡುತ್ತೇವೆ. ಯಾವುದೇ ಗೊಂದಲ, ಸಮಸ್ಯೆ ಇಲ್ಲ. ಹಣವನ್ನು ಒಳ್ಳೆಯ ಉದ್ದೇಶಕ್ಕಾಗಿ ಸಂಗ್ರಹ ಮಾಡಲಾಗಿದೆ. ನಮ್ಮ ಸಮಾಜ ಜನರು ರಾಮನನ್ನು ಪೂಜಿಸಿ ಆರಾಧಿಸುತ್ತಾರೆ. ಅದಷ್ಟು ಬೇಗ ರಾಮ ಮಂದಿರ ನಿರ್ಮಾಣವಾಗುತ್ತದೆ ಎಂದರು.
ಹೆಚ್‌ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿ, ಕನ್ನಡಿ ಹಿಡಿದು ಅವರವರೇ ನೋಡಿಕೊಳ್ಳಬೇಕಾಗುತ್ತದೆ. ಅವರಿಗೆ ಅವರ ಕಾರ್ಯಗಳು ಅವರರವರ ಕನಸಿಗೂ, ಭಾವನೆಗೂ ಪೂರಕವಾಗಿದೆ. ಈ ಸಮಯದಲ್ಲಿ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.