ಮಂಡ್ಯ: ಲಾಕ್‌ಡೌನ್ ವೇಳೆ ಬಡ ಜನರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಆರ್ಥಿಕ ನೆರವು ಯೋಜನೆ ಸ್ವಾಗತಾರ್ಹವಾಗಿದೆ. ಆದರೆ, ಅದು ಅರ್ಹರಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.
ಪಟ್ಟಣದ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವ ಬಗ್ಗೆ ಸ್ಥಳ ಪರಿಶೀಲಿಸಿ ಮಾತನಾಡಿದ ಅವರು, ಲಾಕ್‌ಡೌನ್ ವಿಸ್ತರಣೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಮುದಾಯಗಳಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಇದು ನಿಜವಾದ ಫಲಾನುಭವಿಗಳಿಗೆ ತಲುಪುವ ಸಾಧ್ಯತೆ ಕಡಿಮೆಯಿದೆ.
ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲ ಫಲಾನುಭವಿಗಳಿಗೆ ಪ್ಯಾಕೇಜ್ ಘೋಷಣೆ ಮಾಡುವುದರಿಂದ ಎಲ್ಲ ಸಮುದಾಯಗಳಿಗೂ ಪ್ಯಾಕೇಜ್ ಲಾಭ ಸಿಗಲಿದೆ. ಕಳೆದ ವರ್ಷ ಇದೇ ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರ ವಿವಿಧ ಶ್ರಮಿಕರ ವರ್ಗಕ್ಕೆ ಘೋಷಣೆ ಮಾಡಿದ್ದ ಪರಿಹಾರ ಧನ ಬಹುತೇಕರಿಗೆ ತಲುಪಲಿಲ್ಲ. ಇದಕ್ಕೆ ಕಾರಣ ವ್ಯವಸ್ಥೆ ಕಠಿಣ ನಿಯಮಗಳು ಕಾರಣವಾಗಿದೆ. ಆದ್ದರಿಂದ, ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ ಆರ್ಥಿಕ ನೆರವು ಘೋಷಣೆ ಮಾಡಬೇಕು. ಮುಖ್ಯಮಂತ್ರಿಗಳು ಈ ವಿಚಾರವನ್ನು ಅಧಿಕಾರಿಗಳೊಂದಿಗೆ ಪರಾಮರ್ಶೆ ನಡೆಸಿ ಅನುಷ್ಠಾನಕ್ಕೆ ತರುವುದು ಸೂಕ್ತ ಎಂದರು.
ಕೊರೊನಾದಿಂದ ಮೃತಪಟ್ಟ ವೈದ್ಯಕೀಯ ಸಿಬ್ಬಂದಿ ಹಾಗೂ ಶಿಕ್ಷಕರಿಗೆ ಕನಿಷ್ಠ ಒಂದು ಕೋಟಿ ಪರಿಹಾರ ಘೋಷಣೆ ಮಾಡಬೇಕು. ಕೊರೊನಾ ಸಂಕಷ್ಟದ ಸಮಯದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಪಾತ್ರ ಮಹತ್ವದ್ದಾಗಿದ್ದು, ಈ ಎಲ್ಲರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸೋಂಕಿನಿಂದ ಮೃತಪಟ್ಟ ವೈದ್ಯರು ಹಾಗೂ ಸಿಬ್ಬಂದಿಗೆ ಸರ್ಕಾರ ಒಂದು ಕೋಟಿ ರೂ. ಪರಿಹಾರದ ಜತೆಗೆ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಚುನಾವಣೆಗಳಲ್ಲಿ ಕೆಲಸ ಮಾಡಿದ ಶಿಕ್ಷಕರು ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ. ಇವರ ಕುಟುಂಬವು ಅನಾಥವಾಗಿದೆ. ಇಂತಹ ಕುಟುಂಬಗಳಿಗೆ ಸರ್ಕಾರ 1 ಕೋಟಿ ಪರಿಹಾರದ ಜತೆಗೆ ಕಟುಂಬಕ್ಕೆ ಉದೋಗ್ಯ ನೀಡಲು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.