ಮಂಡ್ಯ: ಇಂದಿನಿಂದ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳು ಆರಂಭಗೊಂಡಿವೆ. ವಿದ್ಯಾರ್ಥಿಗಳು ಸಹ ಉತ್ಸಾಹದಿಂದ ಬರುತ್ತಿದ್ದಾರೆ.
ತರಗತಿ ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಖುಷಿಯಿಂದಲೇ ಬಂದಿದ್ದು, ತರಗತಿಗೆ ತೆರಳುವ ಮುನ್ನ ವಿದ್ಯಾರ್ಥಿಗಳಿಗೆ ಶಿಕ್ಷಕರು ಅಗತ್ಯ ಸಲಹೆ ಸೂಚನೆ ನೀಡಿದರು. ಬಳಿಕ ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಸ್ ಮಾಡಿ ಒಳಗೆ ಪ್ರವೇಶಿಸಿದರು. ತರಗತಿಯಲ್ಲಿ ಕೂಡ ಸರ್ಕಾರದ ಮಾರ್ಗಸೂಚಿ ಅನುಸರಿಸಿ ಪಾಠ ಪ್ರವಚನ ನಡೆಯುತ್ತಿವೆ. 10 ತಿಂಗಳಿಂದ ಆನ್ಲೈನ್ ಪಾಠದಿಂದ ವಿದ್ಯಾರ್ಥಿಗಳಿಗೆ ಮುಕ್ತಿ ಸಿಕ್ಕಿದ್ದು, ತರಗತಿಯಲ್ಲಿ ಆಫ್ಲೈನ್ ಪಾಠವನ್ನು ಮಕ್ಕಳು ಖುಷಿಯಿಂದ ಕೇಳುತ್ತಿದ್ದಾರೆ.
ಇಷ್ಟು ದಿನ ಮನೆಯಲ್ಲಿದ್ದು ತುಂಬಾ ಬೇಸರವಾಗುತ್ತಿತ್ತು, ಈಗ ಶಾಲೆಗೆ ಬಂದಿರೋದು ತುಂಬಾ ಖುಷಿಯಾಗುತ್ತಿದೆ. ಕೊರೊನಾ ಭಯ ಇದೆಯಾದರೂ ಮನೆಯಲ್ಲಿ ಕೂರಲು ಆಗುವುದಿಲ್ಲ. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಶಾಲೆಗೆ ಬರಬೇಕು. ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಬೇಕು ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.