ಮಂಡ್ಯ: ಕಳೆದ ಮೂರು ತಿಂಗಳ ಹಿಂದೆ ಮುಚ್ಚಿ ಹಾಕಲಾಗಿದ್ದ ಚಿನ್ನ ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್ಚು ಬಡ್ಡಿ ಆಸೆ ತೋರಿಸಿ ಮಹಿಳೆಯರಿಂದ ಚಿನ್ನ ಪಡೆದು ವಂಚನೆ ಮಾಡುತ್ತಿದ್ದ ಪ್ರಕರಣ ಇದೀಗ ತಿರುವು ಪಡೆದುಕೊಂಡಿದೆ.
ಫೈನಾನ್ಸ್‌ನಲ್ಲಿ ಇಟ್ಟಿದ್ದ ಚಿನ್ನವನ್ನು ಅಕ್ರಮವಾಗಿ ಬಿಡಿಸಿ, ಅದನ್ನು ಕರಗಿಸಿ ಮಾರಾಟ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಮಂಡ್ಯದ ಆರ್.ಪಿ ರಸ್ತೆ ಬಳಿಯ ಬ್ಯಾಂಕೊಂದರ ವ್ಯವಸ್ಥಾಪಕರಾಗಿದ್ದ ಶಂಕರ್, ಸಹಾಯಕ ವ್ಯವಸ್ಥಾಪಕಿ ಮತ್ತು ಚಿನ್ನ ಪರಿಶೀಲನೆ ನಡೆಸುತ್ತಿದ್ದ ರಾಜೇಶ್ ಎಂಬಾತನನ್ನು ಬಂಧಿಸಲಾಗಿದೆ.
ಈ ಹಿಂದೆ ಮಂಗಳಮುಖಿ ಸೋನಿಯಾ ಎಂಬುವರು ಚಿನ್ನ ಮತ್ತು ಹಣ ನೀಡಿ ವಂಚನೆಗೆ ಒಳಗಾಗಿದ್ದರಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪ್ರಕರಣನ್ನು ಗಂಭೀರವಾಗಿ ಪರಿಗಣಿಸಿದ್ದ ಪೂರ್ವ ಹಾಗೂ ಪಶ್ಚಿಮ ಠಾಣೆ ಪೊಲೀಸರು ಪ್ರಮುಖ ಆರೋಪಿಗಳಾಗಿದ್ದ ಸೋಮಶೇಖರ್ ಹಾಗೂ ಹೇಮಾ(ಹೆಸರು ಬದಲಿಸಲಾಗಿದೆ) ಎಂಬಾಕೆಯನ್ನು ಬಂಧಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವರಿಂದ ಸರಣಿ ದೂರುಗಳು ದಾಖಲಾಗಿದ್ದವು. ಆದರೆ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿರಲಿಲ್ಲ. ಹೀಗಾಗಿ ಪ್ರಮುಖ ಆರೋಪಿ ಹೇಮಾ ಜಾಮೀನಿನ ಮೇಲೆ ಹೊರಬಂದಿದ್ದರು.
ಇದನ್ನು ಓದಿ: ವ್ಯಕ್ತಿಯ ಕತ್ತು ಕೊಯ್ದು ಬರ್ಬರ ಹತ್ಯೆ : ಹಣಕ್ಕಾಗಿ ಕೊಲೆ ಮಾಡಿರುವ ಶಂಕೆ
ಅನೇಕ ಮಂದಿ ವಂಚನೆಗೊಳಗಾದ ಮಹಿಳೆಯರು ದಕ್ಷಿಣ ವಲಯ ಐಜಿಪಿ ವಿಫುಲ್ ಕುಮಾರ್ ಅವರ ಗಮನಕ್ಕೆ ತಂದ ಮೇಲೆ ಪ್ರಕರಣದ ತನಿಖಾ ತಂಡವನ್ನು ಏಕಾಏಕಿ ಬದಲಾವಣೆ ಮಾಡಲಾಗಿದ್ದು, ಜಿಲ್ಲಾ ಅಪರಾಧ ತನಿಖಾ ದಳ (ಡಿಸಿಐಬಿ)ಕ್ಕೆ ವಹಿಸಲಾಗಿದೆ. ಡಿಸಿಐಬಿ ಇನ್‌ಸ್ಪೆಕ್ಟರ್ ಹರೀಶ್ ಕುಮಾರ್ ನೇತೃತ್ವದಲ್ಲಿ ಹೊಸ ತಂಡ ರಚನೆ ಮಾಡಲಾಗಿದೆ. ಹೀಗಾಗಿ ವಂಚನೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಿದ್ದಾರೆ.
ತನಿಖಾ ತಂಡದ ವಿರುದ್ಧ ದೂರು: ಅಧಿಕ ಬಡ್ಡಿಯಾಸೆಗೆ ಯಾವುದೇ ದಾಖಲಾತಿ ಇಲ್ಲದೇ ನೂರಾರು ಮಹಿಳೆಯರು ಚಿನ್ನ ಕೊಟ್ಟಿದ್ದರು. ಮಹಿಳೆಯರು ನೀಡಿದ ದೂರನ್ನು ಪ್ರತ್ಯೇಕ ಪ್ರಕರಣ ಎಂದು ಪರಿಗಣಿಸದೆ ಎಲ್ಲವನ್ನೂ ಒಟ್ಟಾಗಿ ಸೇರಿಸಿ ತನಿಖೆ ಸಮರ್ಪಕವಾಗಿ ನಡೆದಿರಲಿಲ್ಲ. 30 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನ ದಂಧೆ ನಡೆದಿರುವ ಬಗ್ಗೆ ಆರೋಪ ಇದ್ದರೂ ಪೊಲೀಸರು ಕೇವಲ 6 ಕೋಟಿ ಅವ್ಯವಹಾರವಾಗಿದೆ ಎಂದು ತಿಳಿಸಿ ಸುಮ್ಮನಾಗಿದ್ದರು ಎನ್ನಲಾಗ್ತಿದೆ.
ಇತ್ತೀಚಿಗೆ ದಕ್ಷಿಣ ವಲಯ ಐಜಿಪಿ ವಿಫುಲ್‌ಕುಮಾರ್ ನಗರದಲ್ಲಿ ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಚಿನ್ನ ಇಟ್ಟು ಹಣ ಕಳೆದುಕೊಂಡ ಮಹಿಳೆಯರು ನೇರವಾಗಿ ದೂರು ಕೊಟ್ಟಿದ್ದರು. ಸಾರ್ವಜನಿಕರು ಕೂಡ ತನಿಖಾ ತಂಡದ ಕಾರ್ಯವೈಖರಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆರೋಪವನ್ನು ಗಂಭೀರವಾಗಿ ಪರಿಣಗಿಸಿ ಐಜಿಪಿ ತನಿಖಾ ತಂಡ ಬದಲಾವಣೆ ಮಾಡುವಂತೆ ಸೂಚನೆ ನೀಡಿದ್ದರು. ತನಿಖೆ ಆರಂಭಿಸಿದ ಹರೀಶ್ ಕುಮಾರ್ ನೇತೃತ್ವದ ತಂಡ ಬ್ಯಾಂಕ್ ಸಿಬ್ಬಂದಿಯನ್ನು ಬಂಧಿಸಿದೆ. ಇದರಿಂದಾಗಿ ಇಡೀ ಪ್ರಕರಣ ತಿರುವು ಪಡೆದುಕೊಂಡಿದೆ.