ಮಂಡ್ಯ: ಜಿಲ್ಲೆಯಲ್ಲಿ ಚಿನ್ನ ದೋಖಾ ಪ್ರಕರಣದಲ್ಲಿ ಮಹಜರು ನೆಪದಲ್ಲಿ ಮನೆಗೆ ಬಂದಿದ್ದ ಪೊಲೀಸರು ಚಿನ್ನ, ಹಣ ತಂದಿಟ್ಟು ತನ್ನ ಮಗನ ಮೇಲೆ ಆರೋಪ ಬರುವಂತೆ ಮಾಡಿದ್ದಾರೆ ಎಂದು ಪ್ರಕರಣದ ಬಂಧಿತ ಆರೋಪಿ ಸೋಮಶೇಖರ್ ತಾಯಿ ತಾಯಮ್ಮ ಆರೋಪಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಂದ ಚಿನ್ನ ಸಂಗ್ರಹಿಸಿ ವಂಚಿಸಿದ್ದ ಪ್ರಕರಣದಲ್ಲಿ ಪೊಲೀಸರೂ ಶಾಮೀಲಾಗಿದ್ದಾರೆ. ನಮ್ಮ ಪುತ್ರನ ಬಂಧನದ ನಂತರ ಪೊಲೀಸರು ನಮ್ಮ ಮನೆಗೆ ಬಂದಿದ್ದರು, ಆಗ ಅವರಿಗೆ ಯಾವುದೇ ಚಿನ್ನ, ಹಣ ಸಿಗಲಿಲ್ಲ. ಒಂದೆರಡು ದಿನಗಳ ನಂತರ ಮತ್ತೆ ಬಂದ ಪೊಲೀಸರು ಮಗನ ಕೊಠಡಿಯಲ್ಲಿ ಚಿನ್ನ ಇಡುವುದನ್ನು ನೋಡಿದ್ದೇವೆ. ಅದನ್ನು ವಿಡಿಯೋ ಮಾಡಲು ತೆರಳಿದಾಗ ನಮಗೆ ಬೆದರಿಕೆ ಹಾಕಿದರು ಎಂದು ದೂರಿದರು.
ಮನೆಯಲ್ಲಿ ನಾವು ಯಾವುದೇ ಚಿನ್ನ ಇಟ್ಟಿರಲಿಲ್ಲ, ಆದರೂ ಕೋಟ್ಯಂತರ ಮೌಲ್ಯದ ಚಿನ್ನ ಸಿಕ್ಕಿದೆ ಎಂದು ಹೇಳಿ ಮಗನನ್ನು ಸಿಲುಕಿಸಿದ್ದಾರೆ ಎಂದು ಆರೋಪಿಸಿದ ಅವರು, ಪೊಲೀಸರ ಬೆದರಿಕೆಯಿಂದಾಗಿ ನಾನು ಇಷ್ಟು ದಿನ ಬಾಯಿ ಬಿಟ್ಟಿರಲಿಲ್ಲ. ಎಲ್ಲಾ ಆರೋಪಗಳನ್ನು ನನ್ನ ಮಗನ ಮೇಲೆಯೇ ಹೊರಿಸುತ್ತಿರುವುದನ್ನು ನೋಡಿಕೊಂಡು ಸುಮ್ಮನಿರಲು ಆಗುತ್ತಿಲ್ಲ. ಚಿನ್ನದ ವಹಿವಾಟು ನಡೆಸುತ್ತಿದ್ದ ಮಹಿಳೆಯರು, ಫೈನಾನ್ಸ್ ಸಿಬ್ಬಂದಿ ಹಾಗೂ ಪೊಲೀಸರು ನನ್ನ ಮಗನನ್ನು ಬಲಿಪಶು ಮಾಡಿದ್ದಾರೆ ಎಂದು ಆಳಲು ತೋಡಿಕೊಂಡರು.
ಓದಿ: 500ಕ್ಕೂ ಹೆಚ್ಚು ನಕಲಿ ಖಾತೆ.. ಕೋಟ್ಯಂತರ ರೂ. ಮೌಲ್ಯದ ಚಿನ್ನ ಅಡ.. ವಿಚಾರಣೆ ವೇಳೆ ಸತ್ಯ ಬಯಲು
ಪೊಲೀಸರ ವಿರುದ್ಧ ದಕ್ಷಿಣ ವಲಯ ಐಜಿ ವಿಫುಲ್ ಕುಮಾರ್ ಅವರಿಗೆ ದೂರು ಸಲ್ಲಿಸಲು ನಿರ್ಧರಿಸಿದ್ದೇನೆ. ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಪೂಜಾ ನಿಖಿಲ್ ಈಗಾಗಲೇ ಜಾಮೀನಿನ ಮೇಲೆ ಹೊರ ಬಂದಿದ್ದಾಳೆ. ಆಕೆ ಶ್ರೀಮಂತಳಾದ ಕಾರಣ ಆಕೆಗೆ ಹೊರಗೆ ಬರಲು ಸಾಧ್ಯವಾಗಿದೆ. ಆದರೆ, ನಾನು ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡಿದ್ದೇನೆ. ಮಗಳಿಗೆ ಪುಟ್ಟ ಮಕ್ಕಳಿವೆ, ನಾನು ಅನಾರೋಗ್ಯದಿಂದ ಬಳಲುತ್ತಿದ್ದು, ಸಂಕಷ್ಟದ ಜೀವನ ನಡೆಸುತ್ತಿದ್ದೇನೆ ಎಂದರು.
80 ಸಾವಿರ ವಸೂಲಿ:
ಮಗನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸುವುದಾಗಿ ಹೇಳಿ ಬಿಜೆಪಿ ನಾಯಕಿ ಮೀನಾ ನಾಗೇಶ್ ಹಾಗೂ ಇತರರು ನನ್ನಿಂದ 80 ಸಾವಿರ ವಸೂಲಿ ಮಾಡಿದ್ದಾರೆ. ಆದರೆ ವಕೀಲರಿಗೆ ಕೇವಲ 5 ಸಾವಿರ ರೂ ಕೊಟ್ಟು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸೋಮಶೇಖರ್‌ನನ್ನು ಕರೆದುಕೊಂಡು ಬರುವುದಾಗಿ ತಿಳಿಸಿ ಈಗಲೂ ಹಣ ಕೇಳುತ್ತಿದ್ದಾರೆ. ವಕೀಲರನ್ನು ಕೇಳಿದರೆ ಯಾರೂ ಹಣ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಮೊದಲೇ ಕಷ್ಟದಲ್ಲಿರುವ ನನಗೆ ಮತ್ತೆಮತ್ತೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.