ಮಂಡ್ಯ: ಮಾಜಿ ಪ್ರಧಾನಿ ದೇವೇಗೌಡರು ಉಪಚುನಾವಣೆ ಅಖಾಡಕ್ಕೆ ಧುಮುಕಿದ್ದು, ಕೆಆರ್ಪೇಟೆ ವಿಧಾನಸಭಾ ಕ್ಷೇತ್ರದ ಕಿಕ್ಕೇರಿ ಹಾಗೂ ಸಂತೇಬಾಚಹಳ್ಳಿ ಹೋಬಳಿಯಲ್ಲಿ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ.
ಆನಗೋಳದಲ್ಲಿ ಪ್ರಚಾರದ ವೇಳೆ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೆಗೌಡ, ಹಳ್ಳಿ-ಹಳ್ಳಿ ಸುತ್ತಿ ಮಾಜಿ ಸ್ಪೀಕರ್ ಕೃಷ್ಣನನ್ನು ಗೆಲ್ಲಿಸಿದೆ. ಅಂದು ಮುಂಬರುವ ಲೋಕಸಭೆಗೆ ನಿಮ್ಮನ್ನ ನಿಲ್ಲಿಸ್ತೀನಿ. ದೇವರಾಜುಗೆ ಟಿಕೆಟ್ ಕೊಡ್ತೀನಿ ಅಂತ ಹೇಳಿದ್ದೆ. ದೇವರಾಜ್ ನಿಷ್ಠಾವಂತ ಕಾರ್ಯಕರ್ತ. ಆತ ಗಡಸಾಗಿ ಮಾತನಾಡಲ್ಲ, ಮೃದು ಅಂತಾರೆ. ಮನುಷ್ಯನ ಪ್ರತಿಭೆ ಸ್ಥಾನದಲ್ಲಿ ಕೂರಿಸಿದಾಗ ಮಾತ್ರ ಹೊರ ಬರುತ್ತೆ. ನನ್ನ ಜೀವನದಲ್ಲಿ ದೇವರಾಜ್ ಶಾಸಕರಾಗಬೇಕು, ಆತನಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನ ತುಳಿಯಲು ಸಾಧ್ಯವಿಲ್ಲ. ರಾಜ್ಯದ ನೀರಾವರಿ ವಿಚಾರದಲ್ಲಿ ಎರಡೂ ಪಕ್ಷಗಳು ನಿರ್ಲಕ್ಷ್ಯ ತೋರಿವೆ. 2016ರಲ್ಲಿ ಕಾವೇರಿ ವಿಚಾರದಲ್ಲಿ ಇದೇ ಸಿದ್ದರಾಮಯ್ಯ, ಕಾನೂನು ತಜ್ಞರು ಮನೆಗೆ ಬಂದು ನಿಮ್ಮ ಸಲಹೆ ಬೇಕು ಬನ್ನಿ ಹೋರಾಟಕ್ಕೆ ಅಂದ್ರು. 1999 ರಲ್ಲಿ ದೇವೇಗೌಡ ಕಥೆ ಮುಗಿಯಿತು ಅಂತ ನನ್ನ ಸಂಬಂಧಿಕರೇ ಮಾತನಾಡಿದ್ರು. ಆದ್ರೆ, ರಾಜ್ಯದ ರೈತರ ಪರ ಹೋರಾಟ ಮಾಡುವ ಕೆಚ್ಚಿದೆ, ಇನ್ನೂ ಶಕ್ತಿ ಇದೆ ಹೋರಾಟ ಮಾಡ್ತೀನಿ ಎಂದರು.
ದೇವರಾಜ್‌ಗೆ ಕೊಡುವ ಒಂದೊಂದು ಓಟು ತುಮಕೂರಿನಲ್ಲಿ ಸೋತ ದೇವೇಗೌಡನಿಗೆ ಕೊಡುವ ಓಟು. ದಯಮಾಡಿ ದೇವರಾಜ್ ಗೆಲ್ಲಿಸಿಕೊಡಿ. ನಾನು ಸೋತರೂ ಪ್ರಚಾರಕ್ಕೆ ಬಂದು ಮತ ಕೇಳ್ತೀನಿ. ನಾನು ಸುಮ್ಮನೆ ಮನೆಯಲ್ಲಿ ಕೂರುವ ವ್ಯಕ್ತಿಯಲ್ಲ, ಈ ನನ್ನ ಹೋರಾಟ ರೈತರು ಇರೋವರೆಗೂ ಇರುತ್ತೆ ಎಂದು ಘೋಷಣೆ ಮಾಡಿದರು.