ಮಂಡ್ಯ : ನಾನು ಇನ್ನು ಮುಂದೆ ಕಣ್ಣಲ್ಲಿ ನೀರು ಹಾಕೋದೇ ಬೇಡ ಎಂದು ನಿರ್ಧರಿಸಿದ್ದೇನೆ ಎಂದು ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನ ಪರಿಷತ್ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅಪ್ಪಾಜಿಗೌಡ ಪರ ಸುದ್ದಿಗೋಷ್ಠಿ ನಡೆಸಿ ಪ್ರಚಾರ ನಡೆಸಿದ ಅವರು, ನಾನು ಇನ್ಮುಂದೆ ಕಣ್ಣಲ್ಲಿ ನೀರು ಹಾಕೋದೇ ಬೇಡ ಎಂದು ನಿರ್ಧರಿಸಿದ್ದೀನಿ. ನಾನು ಕಟುಕ ಹೃದಯ ಹೊಂದಿಲ್ಲ. ಜನರ ಕಷ್ಟ, ಅನುಕಂಪ, ಭಾವನಾತ್ಮಕ ವಿಚಾರ ನೋಡಿದಾಗ ನಮ್ಮ ಹೃದಯ ಮಿಡಿಯುತ್ತೆ.
ನಾನು ಸಿಎಂ ಆಗಿದ್ದಾಗ ಕನಗನಮರಡಿ ಬಸ್ ದುರಂತ ನಡೆಯಿತು. ಅದನ್ನ ನೋಡಿ ನಾನು ಕಣ್ಣಲ್ಲಿ ನೀರು ಹಾಕಿದ್ದೆ. ಕೆಲವರು ಟವಲ್ನಲ್ಲಿ ಗ್ಲಿಸರಿನ್ ಹಾಕೊಂಡು ಅಳುತ್ತಾರೆ ಎಂದು ಆರೋಪಿಸಿದ್ದರು ಎಂದರು. ಅ0ಪ್ಪಾಜಿಗೌಡ ಪರ ಜಿಲ್ಲೆಯಲ್ಲಿ ಉತ್ತಮ ವಾತಾವರಣ ಇದೆ. ಈಗಾಗಲೇ ನಿಖಿಲ್ ಕುಮಾರಸ್ವಾಮಿ ಜಿಲ್ಲೆಯಾದ್ಯಂತ ಪ್ರಚಾರ ಸಭೆಗಳನ್ನು ನಡೆಸಿದ್ದಾರೆ.
ನಾವು ಎಲ್ಲಾ ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಕೇವಲ 6 ಕ್ಷೇತ್ರದಲ್ಲಿ ಮಾತ್ರ ಕಣಕ್ಕಿಳಿಸಿದ್ದು, ಮಂಡ್ಯದಲ್ಲಿ ನಾನು ಪ್ರಚಾರಕ್ಕೆ ಬರಲು ಸಮಯದ ಅಭಾವವಿತ್ತು ಎಂದರು. ಬಿಜೆಪಿ ಸರ್ಕಾರದ ಮಂತ್ರಿಯ ಪಿಎ ಆಗಿದ್ದ ವ್ಯಕ್ತಿಗೆ ಕಾಂಗ್ರೆಸ್ ಟಿಕಟ್ ನೀಡಿದ್ದು, ಆತನ ಬಳಿ ಹಣಕ್ಕಾಗಿ ಜಿಲ್ಲೆಯ ಕಾಂಗ್ರೆಸ್ಸಿಗರು ಕ್ಯೂ ನಿಂತಿದ್ದಾರೆ ಎಂದು ಟೀಕಿಸಿದರು.
ನಾನು ಸಿಎಂ ಆಗಿದ್ದಾಗ ಮಂಡ್ಯ ಜಿಲ್ಲೆಯ ಮೂಲಸೌಕರ್ಯಕ್ಕೆ 50 ಕೋಟಿ ಬಿಡುಗಡೆ ಮಾಡಿದ್ದೆ. ಮೈಷುಗರ್ ಕಾರ್ಖಾನೆಯ ಪುನಶ್ಚೇತನಕ್ಕೆ 400 ಕೋಟಿ ಕಾಯ್ದಿರಿಸಿದ್ದೆ. ಆದರೆ, ಆ ಎಲ್ಲಾ ಹಣವನ್ನು ಇದೀಗ ಬಿಜೆಪಿ ಸರ್ಕಾರ ತಡೆ ಹಿಡಿದಿದ್ದು, ಯಾವ ಮುಖ ಹೊತ್ತು ಮಂಡ್ಯದಲ್ಲಿ ಮತ ಕೇಳುತ್ತಾರೆ ಎಂದರು.
ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ನಾಳೆ ಸುದ್ದಿಗೋಷ್ಠಿ ಕರೆದು ನಿರ್ಧಾರ ಮಾಡುವೆ. ಜೆಡಿಎಸ್ ಅನ್ನು ಕುಟುಂಬ ಪಕ್ಷ ಎನ್ನುವ ಅವರು, ಸಿದ್ದರಾಮಯ್ಯ ತಮ್ಮ ಓರ್ವ ಮಗನನ್ನು ರಾಜಕೀಯಕ್ಕೆ ಕರೆತಂದು ಅವರು ಸಾವನ್ನಪ್ಪಿದ ಬಳಿಕ ಡಾಕ್ಟರ್ ಇದ್ದ ಮಗನನ್ನು ಕರೆತಂದಿದ್ದಾರೆ. ಇದು ಕುಟುಂಬ ರಾಜಕಾರಣ ಅಲ್ವಾ ಎಂದು ಪ್ರಶ್ನಿಸಿದರು. ಸದ್ಯ ಚುನಾವಣೆಯಲ್ಲಿ ಕಾಂಗ್ರೆಸ್ನ 8 ಅಭ್ಯರ್ಥಿಗಳನ್ನು ತಮ್ಮ ಕುಟುಂಬದಿಂದಲೇ ಕಣಕ್ಕಿಳಿಸಿದ್ದಾರೆ ಎಂದರು.