ಮಂಡ್ಯ: ಮೋದಿ ಎರಡು ಸಲ ಪ್ರಧಾನಿ ಆಗವ್ನೇ. ಆತ ಜನರಿಗೆ ಪ್ರತಿ ತಿಂಗಳು 2 ಸಾವಿರ ಕೊಟ್ಟಿದ್ದನ್ನ ದೊಡ್ಡದು ಅಂತಾರೆ. ಆದರೆ ನಾನು 14 ತಿಂಗಳ ಕಾಲ ಸಿಎಂ ಆಗಿದ್ದವನು. ಆಗಿನ ಸಮ್ಮಿಶ್ರ ಸರ್ಕಾರದಲ್ಲಿ 25 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದೆ ಇದು ದೊಡ್ಡದಲ್ಲವಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ನೇರಲಕೆರೆ ಗ್ರಾಮದಲ್ಲಿ 14 ಹಳ್ಳಿಗಳಿಗೆ ನೀರು ಒದಗಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಮಸ್ತ ರೈತರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ನಾನು 2018ರ ಚುನಾವಣಾ ಪ್ರಚಾರದ ವೇಳೆ ಈ ಕುಡಿಯುವ ನೀರಿನ ಯೋಜನೆಗೆ ಇಲ್ಲಿಯ ಜನ ಬೇಡಿಕೆ ಇಟ್ಟಿದ್ರು. ಈ 14 ಹಳ್ಳಿಗಳಿಗೆ ನೀರು ಒದಗಿಸುವ ಯೋಜನೆ ಈಗಾಗಲೇ ಉದ್ಘಾಟನೆ ಆಗಬೇಕಿತ್ತು. ಆದರೆ ಈ ಯೋಜನೆಗೆ ಇಂದು ಶಂಕುಸ್ಥಾಪನೆ ಮಾಡುವ ಪರಿಸ್ಥಿತಿ ಬಂದಿದೆ ಎಂದರು.
2018ರ ಚುನಾವಣೆಯಲ್ಲಿ ಏಳಕ್ಕೆ ಏಳು ಕ್ಷೇತ್ರ ಗೆಲ್ಲಿಸಿಕೂಟ್ಟಿದ್ದಿರಿ. ಅದರ ಭಾಗವಾಗಿ ದೆಹಲಿ ನಾಯಕರ ಬೆಂಬಲದಿಂದಾಗಿ ನಾನು ಸಿಎಂ ಕೂಡ ಆಗಿದ್ದೆ. 2018ರ ಬಜೆಟ್ನಲ್ಲಿ ಈ ಯೋಜನೆಗೆ ಅನುಮೋದನೆ ಕೊಟ್ಟಿದ್ದೆ. ಮಂಡ್ಯ ಜಿಲ್ಲೆಯ 9 ಸಾವಿರ ಕೋಟಿ ರೂಪಾಯಿ ಯೋಜನೆಗಳಿಗೆ ಚಾಲನೆ ಕೊಟ್ಟೆ. ಅದಕ್ಕೆ ಬಿಜೆಪಿಯವರು ಮಂಡ್ಯ ಜಿಲ್ಲೆ ಬಜೆಟ್ ಎಂದು ವಿಧಾನಸೌಧದಲ್ಲಿ ವ್ಯಂಗ್ಯವಾಡಿದ್ರು. ಆದರೆ ರಾಮನಗರ ಬಳಿಕ ನಾನು ನಂಬಿದ ಜಿಲ್ಲೆ ಮಂಡ್ಯ. ಇಲ್ಲಿಯ ಜನ ಒಮ್ಮೆ ಯಾರನ್ನಾದರೂ ನಂಬಿದ್ರೆ ಕೈ ಬಿಡುವವರಲ್ಲ ಎಂದರು.
ಓದಿ: ಶ್ರೀರಂಗಪಟ್ಟಣಕ್ಕೆ ಹೆಚ್ಡಿಕೆ ಆಗಮನ : ವಿವಿಧ ಕಾಮಗಾರಿಗೆಳಿಗೆ ಶಂಕು ಸ್ಥಾಪನೆ ನೆರವೇರಿಸಲಿರುವ ಮಾಜಿ ಸಿಎಂ
ಮಹಾರಾಜರು ಕಟ್ಟಿದ ಕಾರ್ಖಾನೆ ಮೈಷುಗರ್. ಈ ಇತಿಹಾಸ ಉಳ್ಳ ಕಾರ್ಖಾನೆಯನ್ನ ಖಾಸಗಿಯವರಿಗೆ ಕೊಡಲು ಬಿಜೆಪಿಯವರು ಹೊರಟ್ಟಿದ್ದಾರೆ. ನಾನು ಹೊಸ ಕಾರ್ಖಾನೆ ಮಾಡಲು ನೂರು ಕೋಟಿ ಇಟ್ಟಿದ್ದೆ. ಆ ಹಣವನ್ನು ಬೇರೊಂದಕ್ಕೆ ವರ್ಗಾಯಿಸಿದ್ದಾರೆ. ನಾವು ಬದುಕಿರೋದು ನಿಮ್ಮ ಜೊತೆಯಲ್ಲಿ. ನಮ್ಮ ಬಗ್ಗೆ ಅಪಪ್ರಚಾರ ಮಾಡೋರಿಗೆ ಕಿವಿಗೊಡಬೇಡಿ ಎಂದು ಹೆಚ್ಡಿಕೆ ಮನವಿ ಮಾಡಿದರು.
ಕಮಿಷನ್ ಸರ್ಕಾರ ಎನ್ನಲಿಲ್ಲ:
ನಾನು ಅಧಿಕಾರದಲ್ಲಿದ್ದಾಗ ಯಾರೂ ಕಮಿಷನ್ ಸರ್ಕಾರ ಎನ್ನಲಿಲ್ಲ. ಈಗ ಬಿಜೆಪಿ, ಕಾಂಗ್ರೆಸ್ ಪರಸ್ಪರ ಆರೋಪ ಮಾಡ್ತಿವೆ ಎಂದು ಹೆಚ್ಡಿಕೆ ವ್ಯಂಗ್ಯವಾಡಿದರು. ನೀವು ನನಗೆ ಎಂದೂ ಕಮಿಷನ್ ಕೊಡಲಿಲ್ಲ, ಕಮಿಷನ್ ರೂಪದಲ್ಲಿ ಪ್ರೀತಿಯ ಮತ ಕೊಟ್ಟಿದ್ದೀರಿ. ಇವತ್ತಿನ ಸರ್ಕಾರದಲ್ಲಿ ಕೆಲಸ ಕೊಡೋಕೆ, NOC ಕೊಡೋಕೆ ದುಡ್ಡು ಕೊಡಬೇಕು. ಇವರಂತೆ ನಾನು ಹಣ ಮಾಡಿದ್ರೆ ಒಂದೊಂದು ಓಟಿಗೆ 2-3 ಸಾವಿರ ರೂ. ನೀಡುತ್ತಿದೆ ಎಂದರು.
ಸಂಕ್ರಾಂತಿ ನಂತರ ಪಕ್ಷ ಸಂಘಟನೆ:
ಸಂಕ್ರಾಂತಿ ನಂತರ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುತ್ತೇನೆ. ಉತ್ತರ ಕರ್ನಾಟಕ ಭಾಗದಲ್ಲೂ ಸಂಚಾರ ಮಾಡ್ತೀನಿ. ರೈತನಿಗೆ ಲಾಭದಾಯಕ ಕಾರ್ಯಕ್ರಮ ಕೊಡಬೇಕು. ಬಿಜೆಪಿ ಅವರು, ರಾಮ ಮಂದಿರ ಕಟ್ತೀನಿ ಅಂತಾರೆ. ಉತ್ತರ ಪ್ರದೇಶದಲ್ಲಿ ಮಹಿಳೆ ಅತ್ಯಾಚಾರ, ಹತ್ಯೆ ಆಗ್ತಿದೆ. ಬಿಜೆಪಿ ಸರ್ಕಾರ ಇರುವ ಕಡೆ ಅತ್ಯಾಚಾರ, ಹತ್ಯೆ ಹೆಚ್ಚಾಗ್ತಿವೆ. ಇವರು ರಾಮನ ಪೂಜೆ ಮಾಡೋರು ಇರುವ ಸರ್ಕಾರ ರಚಿಸಿರುವ ರಾಜ್ಯಗಳ ಸ್ಥಿತಿಯಾವ ಪರಿಸ್ಥಿತಿಗೆ ತಲುಪಿದೆ. ಇಂತಹವರು ರಾಮನ ಹೆಸರಲ್ಲಿ ಪೂಜೆ, ರಾಜಕೀಯ ಮಾಡ್ತಾರೆ. ಆ ಮೂಲಕ ಯುವಕರನ್ನ ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಕಟ್ಟಿದ ಮನೆಗಳಲ್ಲಿ ಬಿಜೆಪಿಯವರು ಉದ್ಘಾಟನೆ ಮಾಡಿ ಫೋಟೋ ತೆಗೆಸಿಕೊಳ್ತಾರೆ. ನನಗೆ ಒಂದೇ ಒಂದು ಅವಕಾಶ ಕೊಡಿ. ಸ್ವತಂತ್ರವಾಗಿ 5 ವರ್ಷ ಅಧಿಕಾರ ನಡೆಸುತ್ತೇನೆ. ನನ್ನ ಯೋಜನೆಗಳು ಏನು ಅನ್ನೋದನ್ನ ಮಾಡಿ ತೋರಿಸುತ್ತೇನೆ ಎಂದರು.