ಮಂಡ್ಯ: ನಾಪತ್ತೆಯಾಗಿದ್ದ ನವ ವಿವಾಹಿತನೋರ್ವ ಶವವಾಗಿ ಪತ್ತೆಯಾದ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದ ಹೇಮಾವತಿ ನದಿಯಲ್ಲಿ ನಡೆದಿದೆ.
ಮಂಜು (29) ಎಂಬಾತ ಮೃತ ವ್ಯಕ್ತಿ. ಈತ, ಮಂಡ್ಯ ಜಿಲ್ಲೆಯ ಸಿದ್ಧಯ್ಯನಕೊಪ್ಪಲು ಗ್ರಾಮದ ನಿವಾಸಿ. ಸೆ.18 ರಂದು ತನ್ನದೇ ಊರಿನ ಯುವತಿವೋರ್ವಳನ್ನು ಪ್ರೀತಿಸಿ, ಶಿವಮೊಗ್ಗದ ಶಿಕಾರಿಪುರದಲ್ಲಿ ಮದುವೆ ಮಾಡಿಕೊಂಡಿದ್ದ. ಹುಡುಗಿ ವಿರೋಧ ಇದ್ದರೂ ಆಕೆಗೆ ಮದ್ದೂರಿನ ರುದ್ರಾಕ್ಷಿಪುರದ ಕಿರಣ್ ಎಂಬುವನ ಜೊತೆ ಪೋಷಕರು ನಿಶ್ಚಿತಾರ್ಥ ಮಾಡಿದ್ದರು. ಜೊತೆಗೆ ಅದ್ಧೂರಿ ಮದುವೆಗೆ ಸಿದ್ದತೆ ಸಹ ನಡೆಸಿದ್ದರು. ಅದರಂತೆ ಅಕ್ಟೋಬರ್ 23-24 ರಂದು ಮದುವೆ ದಿನಾಂಕ ನಿಗದಿ ಮಾಡಿದ್ದರು. ಇದಕ್ಕೂ ಮುನ್ನವೇ ಅಂದ್ರೆ ಸೆಪ್ಟಂಬರ್ 18 ರಂದು ಶಿಕಾರಿಪುರದಲ್ಲಿ ಮಂಜು ಹಾಗೂ ಆ ಯುವತಿ ಗುಟ್ಟಾಗಿ ಮದ್ವೆಯಾಗಿ ಮಂಡ್ಯದಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ನವೆಂಬರ್ 9 ರ ಸಂಜೆ ಹಾಲು ತರೋದಾಗಿ ಹೇಳಿ ಹೋಗಿದ್ದ ಮಂಜು ಅವತ್ತಿನಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ದೂರು ದಾಖಲಾಗಿತ್ತು. ನಿನ್ನೆ ಹೊಳೆನರಸೀಪುರ ನದಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಎರಡು ಕೈಯ್ಯಲ್ಲಿದ್ದ ಹಚ್ಚೆಯಿಂದ ಈತನ ಶವ ಗುರುತಿಸಲಾಗಿದೆ.
ಕುತ್ತಿಗೆ ಕುಯ್ದು ಕೊಲೆ ಮಾಡಿ, ದೇಹಕ್ಕೆ ಹಗ್ಗ ಬಿಗಿದು ನದಿಗೆ ಎಸೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮಂಜು ಪತ್ನಿ ತನ್ನ ಕುಟುಂಬಸ್ಥರ ಮೇಲೆ ಅನುಮಾನ ವ್ಯಕ್ತಪಡಿಸಿರುವ ಹಿನ್ನೆಲೆ ಇತ್ತ ಮೃತನ ಪೋಷಕರು ದೂರು ನೀಡಿದ್ದಾರೆ.