ಮಂಡ್ಯ: ಸರ್ಕಾರಿ ಗೋಕಟ್ಟೆ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗ್ರಾಮದವರು ಪರಸ್ಪರ ದೊಣ್ಣೆಯಿಂದ ಬಡಿದಾಡಿಕೊಂಡಿರುವ ಘಟನೆ ನಾಗಮಂಗಲ ತಾಲೂಕಿನ ಹೊನ್ನುಡಿಕೆ ಹಳ್ಳಿಯಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೊನ್ನುಡಿಕೆ ಗ್ರಾಮಕ್ಕೆ ಹೊಂದಿಕೊಂಡಿರುವ ಅರೆಹಳ್ಳಿ ಸರ್ವೇ ನಂ.5ರಲ್ಲಿ ಸರ್ಕಾರಿ ಗೋಕಟ್ಟೆ ಇದೆ. ಗ್ರಾಮದ ಕೆಲ ಪ್ರಭಾವಿಗಳು ಈ ಗೋಕಟ್ಟೆಯನ್ನು ಒತ್ತುವರಿ ಮಾಡಿಕೊಂಡಿರುವುದಲ್ಲದೇ, ಅದನ್ನು ಹಿಟಾಚಿ ಯಂತ್ರ ಮತ್ತು ಟ್ರ್ಯಾಕ್ಟರ್ ಬಳಸಿ ಮುಚ್ಚುವ ಕೆಲಸ ಮಾಡಿದ್ದಾರೆ. ಇದನ್ನು ತಡೆಯಲು ಮುಂದಾದ ಹೊನ್ನುಡಿಕೆಹಳ್ಳಿ ಗ್ರಾಮಸ್ಥರು ಮತ್ತು ಒತ್ತುವರಿದಾರರ ನಡುವೆ ಗಲಾಟೆ ನಡೆದಿದೆ ಎನ್ನಲಾಗ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬಿಂಡಿ ಗನವಿಲೆ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಕಾಶ್ ಯತ್ತಿನಮನೆ ಎರಡೂ ಬಣಗಳ ನಡುವೆ ಮಾತುಕತೆ ನಡೆಸಿ ವಿವಾದಿತ ಜಾಗಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ತಹಶೀಲ್ದಾರ್ ಮೂಲಕ ಸೌಹಾರ್ದತೆಯಿಂದ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಂಡು ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ತಿಳಿಸಿ ಹೋಗಿದ್ದಾರೆ. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ಸರ್ಕಾರಿ ಗೋಕಟ್ಟೆ ಉಳಿಸುವಂತೆ ಮನವಿ:
ಅರೆಹಳ್ಳಿ ಸರ್ವೇ ನಂ.5ರಲ್ಲಿರುವ ಸರ್ಕಾರಿ ಗೋಕಟ್ಟೆ ಹೊನ್ನುಡಿಕೆ ಹಳ್ಳಿಗೆ ಹೊಂದಿಕೊಂಡಿದ್ದು, ಎರಡೂ ಗ್ರಾಮಗಳ ಜಾನುವಾರುಗಳಿಗೆ ಅನುಕೂಲವಾಗಲಿದೆ. ಆದರೆ, ಈ ಕಟ್ಟೆಯನ್ನು ಅರೆಹಳ್ಳಿ ಗ್ರಾಮದ ಕೆಲ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವುದರಿಂದ ಜನ ಜಾನುವಾರುಗಳಿಗೆ ತೊಂದರೆಯಾಗಲಿದೆ. ಈ ಸರ್ಕಾರಿ ಗೋಕಟ್ಟೆಯನ್ನು ಉಳಿಸಿಕೊಡುವಂತೆ ಹೊನ್ನುಡಿಕೆ ಹಳ್ಳಿ ಗ್ರಾಮಸ್ಥರು ತಹಶೀಲ್ದಾರ್ಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮಂಗಳೂರಿನ ಓನೆಕ್ಸ್ ಪಬ್ ಮೇಲೆ ಸಿಸಿಬಿ ಪೊಲೀಸರ ದಾಳಿ