ಮಂಡ್ಯ: ಜಮೀನಿನಲ್ಲಿ ಬೆಳೆದಿದ್ದ ಮರ ಕಡಿದಿದ್ದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕು ಕೂಳಗೆರೆ ಗ್ರಾಮದಲ್ಲಿ ನಡೆದಿದೆ.
ಕೂಳಗೆರೆ ಗ್ರಾಮದ ಮಹೇಶ(35), ಮಹದೇವು(33) ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರಿಗೂ ಮಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೇ ಗ್ರಾಮದ ಯೋಗೇಶ್, ಮುದ್ದುಮಾದೇಗೌಡ, ಮಲ್ಲರಾಜು ಎಂಬವರು ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಲಾಗಿದ್ದು, ಕೃಷಿ ಜಮೀನಿನಲ್ಲಿ ಮರ ಕಡಿಯಲಾಗಿದೆ ಎಂದು ಕೃಷಿ ಇಲಾಖೆಗೆ ದೂರು ಸಲ್ಲಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.
ಇನ್ನೊಂದು ಕುಟುಂಬದ ಸದಸ್ಯರನ್ನ ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎರಡೂ ಕುಟುಂಬದ ಸದಸ್ಯರು ಮಾರಕಾಸ್ತ್ರಗಳಿಂದ ಮಾರಾಮಾರಿ ನಡೆಸಿದ್ದು, ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.