ಮಂಡ್ಯ: ರೈತರ ಮನವಿಗೂ ಬಗ್ಗದೆ ತಮಿಳುನಾಡಿಗೆ ಕೆಆರ್‌ಎಸ್‌ನಿಂದ ನೀರು ಬಿಟ್ಟ ರಾಜ್ಯ ಸರ್ಕಾರದ ವಿರುದ್ಧ ಇಂಡುವಾಳು ಗ್ರಾಮದಲ್ಲಿ ರೈತರು ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 15 ನಿಮಿಷ ರಸ್ತೆ ಬಂದ್ ಮಾಡಿದ ರೈತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಗೆ ಎತ್ತಿನ ಗಾಡಿ ನಿಲ್ಲಿಸಿ ಪ್ರತಿಭಟನೆ ಮಾಡಿದರು. ನಾವು ನೀರು ಕೇಳಿದಾಗ ನಿರ್ವಹಣಾ ಮಂಡಳಿ ಇಲ್ಲ ಎಂದಿದ್ದರು. ಈಗ ಹೇಗೆ ನೀರು ಬಿಟ್ಟಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.
ಶಾಸಕರಿಗೆ ಬಹಿಷ್ಕಾರ: ಜಿಲ್ಲೆಯಲ್ಲಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ, ಶಾಸಕರು ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದಾರೆ. ರೆಸಾರ್ಟ್ ಬಿಟ್ಟು ಬಂದು ರೈತರ ಸಮಸ್ಯೆಗೆ ಸ್ಪಂದಿಸದೇ ಇದ್ದರೆ ಶಾಸಕರಿಗೆ ಬಹಿಷ್ಕಾರ ಹಾಕುವ ಎಚ್ಚರಿಕೆ ನೀಡಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ವಿರುದ್ಧವೂ ಘೋಷಣೆ ಕೂಗಿ, ರೈತರು ಸಂಕಷ್ಟಕ್ಕೊಳಗಾಗಿದ್ದರೆ ಅವರು ದೆಹಲಿ ಸೇರಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಜನಪ್ರತಿನಿಧಿಗಳು ಸಮಸ್ಯೆಗೆ ಸ್ಪಂದಿಸಲು ಮುಂದಾಗಬೇಕು, ಇಲ್ಲವೇ ಮುಂದಿನ ದಿನಗಳಲ್ಲಿ ಸರಿಯಾದ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದರು.
ಸದ್ಯದ ನೀರಿನ ಒಳ ಹರಿವು ಹಾಗೂ ಹೊರ ಹರಿವು ನೋಡುವುದಾದರೆ ಒಳ ಹರಿವು 995 ಕ್ಯೂಸೆಕ್ ಇದ್ದರೆ, ಹೊರ ಹರಿವು 5 ಸಾವಿರಕ್ಕೂ ಹೆಚ್ಚು ಹಾಗೂ ನಾಲೆಗಳಿಗೆ 2611ಕ್ಯೂಸೆಕ್ ನೀರು ಬಿಡಲಾಗಿದೆ. ಸದ್ಯಕ್ಕೆ 90.03 ಅಡಿಯಷ್ಟು ನೀರಿದ್ದು, 15.954 ಟಿಎಂಸಿ ಸಂಗ್ರಹವಿದೆ. ಇಂದು ಬೆಳಗ್ಗೆಯಿಂದ ನದಿಗೆ 5ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ನದಿಗೆ ಕೆಆರ್‌ಎಸ್‌ನಿಂದ ಬಿಡಲಾಗಿದೆ. ಈ ಎಲ್ಲಾ ನೀರು ತಮಿಳುನಾಡಿಗೆ ಹೋಗುತ್ತಿದೆ ಎಂಬುದು ರೈತರ ಆರೋಪವಾಗಿದೆ.